Friday, September 9, 2016

ನೀ ಕನಸಿನೊಳಗೋ?.. ಕನಸು ನಿನ್ನೊಳಗೋ?..




"ಕನಸ್ಸು ಕಂಡೇನೇ.. ಮನದಲಿ ಕಳವಳ ಗೊಂಡೇನೇ.." ಎಂಬುದು ದಾಸವಾಣಿ. ರಾತ್ರಿ ಕಂಡ ಕನಸನ್ನು ಬೆಳಿಗ್ಗೆ ಮನೆಯವರೊಂದಿಗೆ ಮಾತನಾಡುವುದು ಸರ್ವೇ ಸಾಮಾನ್ಯ. ಕನಸುಗಳೇ ಹಾಗೆ. ಕೆಲವೊಮ್ಮೆ ಮನೋರಂಜಿಸುತ್ತವೆ, ಕೆಲವೊಮ್ಮೆ ಗೊಂದಲಿಸುತ್ತವೆ, ಇನ್ನೂ ಕೆಲವೊಮ್ಮೆ ವಿಲಕ್ಷಣವಾಗಿ ತೋರಲ್ಪಡುತ್ತವೆ. ಮಾರನೇ ದಿನ ನಮಗೆ ರಾತ್ರಿ ಬಿದ್ದ ಕನಸುಗಳು ನೆನಪಾದರೂ, ನೆನಪಾಗದೆ ಇದ್ದರೂ, ಕನಸುಗಳೇಕೆ ಬೀಳುತ್ತವೆ ? ಮೂಲತಃ ಕನಸುಗಳೆಂದರೇನು?

ಕನಸುಗಳೆಂದರೆ ಏನು?
ನಾವು ನಿದ್ರಿಸುವಾಗ ನಮ್ಮ ಮನಸ್ಸು ಸೃಷ್ಟಿಸುವ ಕಥೆ ಹಾಗು ಚಿತ್ರಣಗಳನ್ನು ಕನಸುಗಳೆನ್ನುತ್ತಾರೆ. ಕನಸುಗಳ ಬಗ್ಗೆ ಹಲವಾರು ಸಿದ್ದಾಂತಗಳಿದ್ದಾವೆ, ಆದರೆ ನೈಜವಾದ ಸಿದ್ದಾಂತದ ಬಗ್ಗೆ ಗೊಂದಲಗಳಿವೆ. ಕೆಲವು ಸಂಶೋಧಕರು ಕನಸುಗಳಿಗೆ ಸ್ಪಷ್ಟವಾದ ಅರ್ಥ ಅಥವಾ ಕಾರಣಗಳು ಇರುವುದಿಲ್ಲ, ಇವು ನಿದ್ರಾ ಮೆದುಳಿನ ಅಸಂಭದ್ದ ಕ್ರಿಯೆಗಳು ಎನ್ನುತ್ತಾರೆ. ಅಧ್ಯಯನಗಳ ಪ್ರಕಾರ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಗಳ ಮುಖ್ಯ ರೂವಾರಿ ಸುಖ ನಿದ್ರೆ ಮತ್ತು ಕನಸು. ಒಂದು ಅಧ್ಯಯನದ ಪ್ರಕಾರ ಕನಸುಕಾಣುತ್ತಿದ್ದ ವ್ಯಕ್ತಿಯನ್ನು ಸತತವಾಗಿಸಂಶೋಧಕರು ಎಚ್ಚರಗೊಳಿಸತೊಡಗಿದರು. ಕೆಲ ಸಮಯದ ನಂತರ ವ್ಯಕ್ತಿಯಲ್ಲಿ ಗಮನಿಸಿದ ಅಂಶಗಳು ಕೆಳಗಂಡಂತಿವೆ:
೧. ಒತ್ತಡ ಹೆಚ್ಚುವಿಕೆ. 
೨. ಆತಂಕ. 
೩. ಖಿನ್ನತೆ.  
೪. ಏಕಾಗ್ರತೆ ಕಮ್ಮಿಯಾಗುವಿಕೆ. 
೫. ಸಮನ್ವಯತೆ ಕಮ್ಮಿಯಾಗುವುದು. 
೬. ತೂಕ ಹೆಚ್ಚಾಗುವುದು. 
೭. ಭ್ರಮೆ ಜಾಸ್ತಿಯಾಗುವುದು. 

ತಜ್ಞರ ಪ್ರಕಾರ ಕನಸುಗಳಿಂದ ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಹಲವಾರು ಉಪಯೋಗಗಳಿವೆ:
೧. ಜೀವನದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. 
೨. ನೆನಪಿನಶಕ್ತಿ ಹೆಚ್ಚಿಸಲು. 
೩. ಭಾವನೆಗಳನ್ನು ಪ್ರಕ್ರಿಯಿಸಲು. 
ನೀವು ಮಲಗುವಾಗ ಸಮಸ್ಯೆಯಿಂದ ಕೂಡಿದ ಯೋಚನೆಗಳನ್ನಿಟ್ಟುಕೊಂಡಿದ್ದರೆ, ಏಳುವಾಗ ಪರಿಹಾರದೊಂದಿಗೆ ಏಳಲು ಸಹಾಯವಾಗುತ್ತದೆ ಅಥವಾ ಕೊನೆ ಪಕ್ಷ ಸಮಸ್ಯೆಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುತ್ತೀರಿ. 

ಸೈಮೌಂಡ್ ಫ್ರಾಯ್ಡ್ ರವರ ಪ್ರಕಾರ ಅಜಾಗೃತ ಮನಸ್ಸಿನ ಕಿಟಕಿ "ಕನಸುಗಳು". ಅವರ ಪ್ರಕಾರ ಕನಸುಗಳು ಒಬ್ಬ ಮನುಷ್ಯನ ಸುಪ್ತ ಮನಸ್ಸಿನ ಬೇಕು-ಬೇಡಗಳನ್ನು, ಯೋಚನೆಗಳನ್ನು ಮತ್ತು ಪ್ರೇರಣಾಗಳನ್ನು ಹೊರ ಹಾಕುತ್ತವೆ. ಆದರೆ ಈ ಎಲ್ಲ ಅಧ್ಯಯನಗಳ ಸಾರಾಂಶವಿಷ್ಟೆ. ಕೆಲವು ಕನಸುಗಳು ನಿಮ್ಮ ದಿನನಿತ್ಯದ ಯೋಚನೆಗಳನ್ನು ಮೆದುಳಿನೊಳಗೆ ಪ್ರಕ್ರಿಯಿಸುತ್ತವೆ. ಇನ್ನೂ ಕೆಲವು ನಮ್ಮ ದೈನಂದಿನ ಕ್ರಿಯೆಗೆ ತಕ್ಕಂತೆ ಅಂತೆಯೇ ಬೀಳುತ್ತವೆ. ಇನ್ನೂ ಸರಿಯಾದ ಉತ್ತರಕ್ಕಾಗಿ ಸಂಶೋಧಕರು ಇದರ ಬಗ್ಗೆ ಅಧ್ಯಯನ ನೆಡಸುತ್ತಿದ್ದಾರೆ. 


ಭಯಾನಕ ಕನಸು(Nightmares)ಗಳೇಕೆ ಬೀಳುತ್ತವೆ?
ಕೆಟ್ಟ ಕನಸುಗಳು ಮಕ್ಕಳು ಮತ್ತು ದೊಡ್ಡವರಲ್ಲಿ ತುಂಬಾ ಸಹಜ. ಕೆಟ್ಟ ಕನಸು ಬೀಳುವುದಕ್ಕೆ ಕೆಲವು ಕಾರಣಗಳೆಂದರೆ :
೧. ಒತ್ತಡ, ಭಯ ಮತ್ತು ಮನಸ್ತಾಪ. 
೨. ಭಾವನಾತ್ಮಕ ಸಮಸ್ಯೆಗಳು. 
೩. ಅತಿಯಾದ ಔಷಧಿಗಳ ಬಳಕೆ. 
೪. ಅನಾರೋಗ್ಯ ಸಮಸ್ಯೆ. 

ನಿಮಗೆ ಪದೇ-ಪದೇ ಭಯಾನಕ ಕನಸುಗಳು ಬೀಳುತ್ತಿದ್ದರೆ, ನಿಮ್ಮ ಸುಪ್ತ ಮನಸ್ಸು ನಿಮಗೆನನ್ನೋ ಹೇಳಲು ಪ್ರಯತ್ನಿಸುತ್ತಿರಬಹುದು. ಸುಪ್ತ ಮನಸ್ಸಿನ ಕಡೆ ಗಮನ ಕೊಡಿ. ನೀವು ಅದನ್ನು ಕಂಡು ಹಿಡಿಯುವಲ್ಲಿ ವಿಫಲರಾಗಿದ್ದರೆ, ಮಾನಸಿಕ ತಜ್ಞರನ್ನು ಭೇಟಿ ಮಾಡಿ. ನೆನಪಿನಲ್ಲಿಡಿ, ಕನಸು ಎಷ್ಟೇ ಭಯಾನಕವಾಗಿದ್ದರೂ ಕೂಡ ಅದು ಕನಸಷ್ಟೇ. ನಿಜ ಜೀವನದಲ್ಲಿ ಅದರಿಂದ ಏನೂ ಬದಲಾಗುವುದಿಲ್ಲ. 

ಸ್ಪಷ್ಟ ಕನಸು (Lucid Dreams)ಗಳೇಕೆ ಬೀಳುತ್ತವೆ?
ನಿಮಗೆ ಎಂದಾದರೂ ಕನಸು ಬೀಳುವಾಗ, ಕನಸಿನ ಅರಿವಾಗಿದ್ದುಂಟೇ? ಇದನ್ನೇ ಲ್ಯೂಸಿಡ್ ಡ್ರೀಮ್ಸ್ ಎನ್ನುತ್ತಾರೆ. ಅಧ್ಯಯನದ ಪ್ರಕಾರ ನಿದ್ರಾ ಸಮಯದಲ್ಲಿ ಪ್ರಕ್ಷುಬ್ಧವಾಗಿರಬೇಕಾದ ಮೆದುಳಿನ ಭಾಗಗಳು ಕ್ರಿಯಾಶೀಲವಾದಾಗ ಈ ತರಹದ ಕನಸುಗಳು ಬೀಳುತ್ತವೆ. ಮನುಷ್ಯ 'ಕಣ್ಣಿನ ತೀವ್ರಗತಿಯ ಚಲನೆ' ನಿದ್ರೆ (REM sleep) ಮತ್ತು ಎಚ್ಚರವಿರುವ ಹಂತಗಳ ಮಧ್ಯೆಯಿದ್ದಾಗ ಇಂಥಾ ಕನಸುಗಳು ಬೀಳುತ್ತವೆ. ಲ್ಯೂಸಿಡ್ ಕನಸುಗಳನ್ನು ಕಾಣುವ ವ್ಯಕ್ತಿಗಳು ತಮ್ಮ ಕನಸಿನ ಧಿಕ್ಕನ್ನು ಬದಲಿಸಬಲ್ಲರು.

ಕನಸುಗಳು ಭವಿಷ್ಯವನ್ನು ಹೇಳುತ್ತವೆಯೇ?
ಹಲವಾರು ಉದಾಹರಣೆಗಳಲ್ಲಿ ಬಿದ್ದ ಕನಸುಗಳು ನಿಜ ಜೀವನದಲ್ಲೂ ಕೂಡ ನೆಡೆದಿವೆ. ಸಂಶೋಧಕರ ಪ್ರಕಾರ ಕನಸುಗಳು ನಿಜವಾದಲ್ಲಿ ಅದಕ್ಕೆ ಕಾರಣಗಳಿವಿರಬಹುದು:
೧. ಕಾಕತಾಳೀಯ. 
೨. ದೋಷಯುಕ್ತ ನೆನಪು. 
೩. ಸುಪ್ತ ಮನಸ್ಸಿನ ಮತ್ತು ಗೊತ್ತಿರುವ ಆಲೋಚನೆಗಳನ್ನು link ಮಾಡಿರುವುದಾಗಿರಬಹುದು. 
ಕೆಲವೊಮ್ಮೆ ಕನಸುಗಳು ನಮ್ಮ ಜೀವನದ ದಿಕ್ಕನ್ನು ಬದಲಿಸುವಲ್ಲಿಗೆ ಪ್ರೇರೇಪಿಸಬಲ್ಲವು. ದಿಕ್ಕನ್ನು ಬದಲಿಸಬಲ್ಲ ಕನಸುಗಳು ಒಂದು ರೀತಿಯಲ್ಲಿ ಭವಿಷ್ಯ ನುಡಿದಂತಲ್ಲವೇ?

ಕನಸುಗಳು ಹೇಗೇ ಇದ್ದರೂ, ಭವಿಷ್ಯವನ್ನು ಹೇಳದೇ ಇದ್ದರೂ ಅವು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಕೊನೆ ಪಕ್ಷ ಒಂದಾದರೂ ಕನಸು ಮರೆಯಲಾಗದ್ದಿರುತ್ತದೆ. ಹಾಸ್ಯ ಭರಿತವಾದ ಅದೆಷ್ಟೋ ಕನಸುಗಳು ನಮ್ಮನ್ನು ರಂಜಿಸಿರುತ್ತವೆ. ಗೊತ್ತಿಲ್ಲದ ಅದೆಷ್ಟೋ ವ್ಯಕ್ತಿಗಳನ್ನು ಕನಸಿನಲ್ಲಿ ಭೇಟಿ ಮಾಡಿರುತ್ತೇವೆ. ಯಾವುದಕ್ಕೂ ಹೆದರದ ವ್ಯಕ್ತಿಯನ್ನ ಕನಸು ಬೆಚ್ಚಿ ಬೀಳಿಸಿರುತ್ತದೆ. ಅಂತಹ ಭಿನ್ನ-ವಿಭಿನ್ನ ಕನಸುಗಳ ವಿಸ್ಮಯವನ್ನು ಸೃಷ್ಟಿಸಿದ ನಿಸರ್ಗೆಗೊಂದು ಸಲಾಮು.

This Article was published on Timeskannada e-newspaper  http://timeskannada.com/?p=5304


Also,  this artcle was published in news paper called "malenaadu mitra"


No comments:

Post a Comment