Tuesday, September 6, 2016

ನಮ್ಮ ಮಕ್ಕಳಿಗೆ ಮಾತೃ ಭಾಷೆ ಕಲಿಸುವುದು ಎಷ್ಟು ಮುಖ್ಯ?




ಕನ್ನಡ ಎನೆ ಕುಣಿದಾಡುವುದೆನ್ನೆದೆ .. 
ಕನ್ನಡ ಎನೆ ಕಿವಿ ನಿಮಿರುವುದು ... 

ಶಾಲಾ ದಿನಗಳಲ್ಲಿ ಕೇಳಿದ ರಾಷ್ಟ್ರಕವಿ ಕುವೆಂಪೂರವರ ಕವನದ ಸಾಲುಗಳಿವು. ಮೇಲಿನಸಾಲುಗಳು ಅಕ್ಷರಶಃ ಸತ್ಯ. ಕನ್ನಡ ಎಂದಾಕ್ಷಣ ನಮ್ಮ ಮನಸ್ಸು ಕುಣಿದಾಡುವುದೆಂದರೆ, ಅದಕ್ಕೊಂದು ಕಾರಣವಿದೆ. ಅದು ನಮ್ಮೆಲ್ಲರ ಪ್ರೀತಿಯ ಮಾತೃ ಭಾಷೆ. ಮಾತೆ ಹಾಗೂ ಮಾತೃ ಭಾಷೆಯೇ ಹಾಗೆ. ಸಾವಿರಾರು ಜನರ ಮಧ್ಯೆ ನಮ್ಮ ತಾಯಿ ಯಾರೆಂದು ನಾವು ಗುರುತಿಸಬಲ್ಲೆವು. ಹಾಗೆಯೇ, ನೂರಾರು ಭಾಷೆಗಳ ನಡುವೆ ಕನ್ನಡವನ್ನು ಕೇಳಿದರೆ ಖಂಡಿತಾ ಕಿವಿ ನಿಮಿರುತ್ತದೆ. ಹಾಗಾದರೆ ಮಾತೃ ಭಾಷೆ ಯಾವುದೇ ಇರಲಿ ಅದಕ್ಕೇಕೆ ಅಷ್ಟೊಂದು ಮಹತ್ವ? ಹೆಸರೇ ಹೇಳುವಂತೆ,  ತಾಯಿ ತನ್ನ ಮಗುವನ್ನು ಗರ್ಭದಲ್ಲಿ ಹೊರುವಾಗ ಮಾತನಾಡಿದ ಭಾಷೆಯದು. ನಾವು ನಮ್ಮ ಕಿವಿಯಲ್ಲಿ ಕೇಳಿದ ಮೊದಲ ಭಾಷೆ. ತಾಯಿ-ಮಗುವಿನ ಭಾವನೆಗಳನ್ನು ಸಂಪರ್ಕಿಸಲು ಸಹಾಯ ಮಾಡಿದ ಭಾಷೆ. ಹಾಗಾದರೆ ನಮ್ಮ ಮಾತೃ ಭಾಷೆ ಕನ್ನಡವನ್ನು ನಾವು ಎಷ್ಟು ಪೋಷಿಸಿ ಬೆಳೆಸುತ್ತಿದ್ದೇವೆ?

ಕಾಲಾನುಸಾರವಾಗಿ, ಸಂದರ್ಭಾನುಸಾರವಾಗಿ ನಾವು ಕರ್ನಾಟಕವನ್ನು ಬಿಟ್ಟು ಬಹುದೂರ ಬಂದಿದ್ದೇವೆ. ಅಷ್ಟೇ ಏಕೆ ಅನಿವಾಸಿ ಭಾರತೀಯರೆಂಬ ಹಣೆಪಟ್ಟಿಯನ್ನು ಕೂಡ ಪಡೆದಿದ್ದೇವೆ. ತಾಯಿಯಿಂದ ದೂರಾದಾಕ್ಷಣ ಆಕೆಯನ್ನು ಮರೆಯಲು ಸಾಧ್ಯವೇ? ಕರ್ನಾಟಕದಿಂದ ದೂರಾದಾಕ್ಷಣ ಕನ್ನಡವನ್ನು ಮರೆಯಬೇಕೆಂದೇ? ಅನಿವಾಸಿ ಕನ್ನಡಿಗಳಾದ ನಾನು ಅನೇಕ ಜನ ಕನ್ನಡಿಗರನ್ನು ನೋಡಿದ್ದೇನೆ. ಕನ್ನಡ ಕೂಟಗಳಿಗೆ, ಕನ್ನಡ ಸಿನೆಮಾಗಳಿಗೆ ಹೋಗುವುದೆಂದರೆ ತುಂಬಾ ಆಸಕ್ತಿ ತೋರಿಸುತ್ತಾರೆ. ಅಲ್ಲಿ ಬಂದಾಕ್ಷಣ ಸ್ನೇಹಿತರೊಂದಿಗೆ, ಮಕ್ಕಳೊಂದಿಗೆ, ಕಾರ್ಯಕರ್ತರೊಂದಿಗೆ Englishನಲ್ಲಿ ಮಾತನಾಡುವುದು. ಕನ್ನಡ ಮಾತನಾಡಿದರೆ ಎಲ್ಲಿ ತಮ್ಮ ಗೌರವಕ್ಕೆ ಧಕ್ಕೆಯಾಗಿ ಬಿಡುವುದೆಂಬ ಭಯ. ಸ್ನೇಹಿತರೆ, ಕನ್ನಡ ನಮ್ಮನ್ನು ಅವಮಾನಿಸಿದೆಯೇ? ಅಥವಾ ನಮ್ಮನ್ನು ಪೋಷಿಸಿ, ಬೆಳೆಸಿ ಈ ಮಟ್ಟಕ್ಕೆ ಬೆಳೆಯಲು ಸಹಾಯ ಮಾಡಿದೆಯೇ? ನೀವೇ ಯೋಚಿಸಿ. ನಾವು ಮೊದ ಮೊದಲು ಭಾವನೆಗಳನ್ನು ತೋರಿಸಿದ್ದು ಕನ್ನಡದಲ್ಲಿ, english, hindi ಅಷ್ಟೇ ಏಕೆ ಕಲಿತ ನೂರಾರು ಭಾಷೆಗಳನ್ನು  ಮನದಾಳದಲ್ಲಿ ಅರ್ಥೈಸಿಕೊಂಡಿದ್ದು ಕನ್ನಡದಲ್ಲಿ. ಹೀಗಿರುವಾಗ ಮಾತನಾಡಲು ಹಿಂದು-ಮುಂದು ನೋಡುವುದೇಕೆ? ಕನ್ನಡ ನಿಮ್ಮನ್ನು ಬೆಳೆಸಿರುವಾಗ, ಕನ್ನಡವನ್ನು ಬೆಳೆಸಲು ನೀವೇಕೆ ಹಿಂಜರಿಯುತ್ತೀರಿ?

ಕನ್ನಡವನ್ನು ಬೆಳೆಸಬೇಕೆಂದರೆ ನೀವು ಸಂಸ್ಥೆ ಕಟ್ಟಿ ಪ್ರಚಾರ ಕೊಡಬೇಕೆಂದಲ್ಲ. ನಿಮಗೆ ಗೊತ್ತಿರುವ ಕನ್ನಡವನ್ನು, ಕನ್ನಡಿಗರೊಂದಿಗೆ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವವರೊಂದಿಗೆ ಮಾತನಾಡಿ. ಮುಖ್ಯವಾಗಿ, ನೀವು ತಂದೆ-ತಾಯಿಗಳಾಗಿದ್ದಲ್ಲಿ ಮನೆಯಲ್ಲಿ ಕನ್ನಡ ಮಾತಾಡಿ.  ನಾವು ಕನ್ನಡ ಪೋಷಿಸುವುದೆಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯುತವಾದ ಕೆಲಸ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು. ಇತ್ತೀಚಿನ ಒಂದು ಅಧ್ಯನದ ಪ್ರಕಾರ, ಮಾತೃಭಾಷೆ ಚೆನ್ನಾಗಿ ಗೊತ್ತಿರುವ ಮಕ್ಕಳ ಗ್ರಹಣ ಶಕ್ತಿ ಹೆಚ್ಚಾಗಿರುತ್ತದೆ ಎಂದು ಸಾಬೀತಾಗಿದೆ. ಏಕೆಂದರೆ ಅಂತಹ ಮಕ್ಕಳು ಯಾವುದೇ ಭಾಷೆಯನ್ನು, ವಿಷಯವನ್ನು ತಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾತೃ ಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಾರೆ.  ಇದನ್ನು ಅಮೆರಿಕನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್ ಕೂಡ ಒಪ್ಪಿಕೊಂಡಿದೆ. ಅಂತಹ ಮಕ್ಕಳು ಮಾತೃಭಾಷೆಯೊಂದೇ ಅಲ್ಲದೆ ಭಾಷಾ ಕಲಿಕೆಯಲ್ಲಿ ಕೂಡ ಮುಂದಿರುತ್ತಾರೆ. 
ನಾವು ನಮ್ಮ ಮಕ್ಕಳಿಗೆ ಮಾತೃಭಾಷೆ ಕಳಿಸುವದರಿಂದಾಗುವ ಉಪಯೋಗಗಳು:
೧. ಗ್ರಹಣ ಶಕ್ತಿ ಹೆಚ್ಚಾಗುತ್ತದೆ. 
೨. ಭಾಷೆ ಕಲಿಸುವದರಿಂದ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. 
೩. ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. 
೪. ಮಾತೃಭಾಷೆ ಕಲೆ-ಸಂಸ್ಕೃತಿಯ ಪ್ರತೀಕ. ಕಲೆ-ಸಾಹಿತ್ಯದ ಆಸಕ್ತಿಯಿರುವ ಮಕ್ಕಳಿಗೆ, ಕಲಿಕೆಗೆ ಭಾಷೆಯ ಸಹಾಯ ಸಿಗುತ್ತದೆ.
೫. ಮುಂದೊಂದು ದಿನ ನಿಮ್ಮ ಮಗು ತನ್ನ ಬೇರನ್ನು ಅರಸಿ ತಾಯ್ನಾಡಿಗೆ ಮರಳಿದಾಗ, ನಿಮ್ಮ ಸಹಾಯದ ಅವಶ್ಯಕತೆ ಇರುವುದಿಲ್ಲ. 

ಪೋಷಕರೇ, ಹೊರಗಿನ ಸಮಾಜ ಮತ್ತು ಸ್ಥಳೀಯ ಭಾಷೆಯ (native language) ಬಗ್ಗೆ ಭಯ ಪಡಬೇಡಿ. ಕೆಲವೊಂದು ವಿಷಯಗಳು ನಮ್ಮ ಸಮಾಜದಿಂದ ಉಚಿತ ಕೊಡುಗೆಯಾಗಿ ಸಿಗುತ್ತವೆ. ಅದರಲ್ಲಿ ಭಾಷೆ ಕೂಡ ಒಂದು. ನೀವು ಕಲಿಸದೇ ಇದ್ದರೂ ಕೂಡ, ನಿಮ್ಮ ಮಗು Englishaನ್ನು ಚೆನ್ನಾಗಿ ಮಾತನಾಡುತ್ತದೆ. ಏಕೆಂದರೆ ಅದು ವ್ಯಾವಹಾರಿಕ ಭಾಷೆಯಾಗಿರುವದರಿಂದ, ಮಗು ಬಹು ಬೇಗ ಕಲಿಯಬಲ್ಲದು. ಉಚಿತವಾಗಿ ಬರುವಾಗ, ಅದನ್ನು ಉಪಯೋಗಿಸಿಕೊಳ್ಳಿ ಮತ್ತು ನಿಮ್ಮ ಮಕ್ಕಳಿಗೆ ಮಾತೃ ಭಾಷೆ ಕಲಿಸಿ. ಕನ್ನಡ ಉಳಿಸಿ, ಬೆಳೆಸಿ. 
ಹಾಗಾದರೆ ಪೋಷಕರಾದ ನೀವು ಮಾಡಬೇಕಾಗಿರುವುದಾದರೂ ಏನು ?
೧. ನಿಮ್ಮ ಮಕ್ಕಳು, ನಿಮ್ಮ ಮಾತೃ ಭಾಷೆಯನ್ನು ಪ್ರೀತಿಸಲು ಅನುವು ಮಾಡಿ ಕೊಡಿ. 
೨. ವ್ಯಾವಹಾರಿಕ ಭಾಷೆಯನ್ನು ಹೊರಗಿನ ಪ್ರಪಂಚಕ್ಕೆ ಕಲಿಸಲು ಬಿಡಿ. 
೩. ಮನೆಯಲ್ಲಿ ಕನ್ನಡ ಮಾತಾಡಿ. ಕಥೆ ಹೇಳುವಾಗ ಆದಷ್ಟು ಕನ್ನಡ ಬಳಸಿ. 
೪. ಕನ್ನಡ ಹಾಡುಗಳನ್ನು ಕೇಳಲು ಅನುವು ಮಾಡಿಕೊಡಿ. 
೫. Internetಲ್ಲಿ ಸಿಗುವ ಕನ್ನಡ ಪುಸ್ತಕ, ಕನ್ನಡ ಪದ್ಯಗಳ ಪರಿಚಯ ಮಾಡಿಸಿ.
 ೬. ಹತ್ತಿರವಿರುವ ಕನ್ನಡ ಕಲಿಕಾ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಿ. 
೭. ರಜಾ ದಿನಗಳಲ್ಲಿ ನಿಮ್ಮವರನ್ನು ಭೇಟಿಯಾಗಲು ಅವಕಾಶ ಮಾಡಿ ಕೊಡಿ. 
೮. ನಮ್ಮ ಕಲೆ-ಸಂಸ್ಕೃತಿಯ ಪರಿಚಯ ಮಾಡಿಸಿ. 

ನಮ್ಮ ಭಾಷೆಯನ್ನು ನಾವು ಪ್ರೀತಿಸಿದರೆ, ಉಳಿದವರೂ ಪ್ರೀತಿಸುತ್ತಾರೆ. ಕನ್ನಡಿಗರಾದ ನಮಗೆ, ನಮ್ಮ ಕಲೆ-ಸಂಸ್ಕೃತಿಯನ್ನು ಉಳಿದ ಪ್ರಪಂಚಕ್ಕೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕಲೆ-ಸಂಸ್ಕೃತಿಯ ಪರಿಚಯಕ್ಕೊಂದು ಒಳ್ಳೆಯ ವೇದಿಕೆ AKKA. ಬಿಡುವಿದ್ದರೆ, ನೀವು ನಿಮ್ಮವರೊಂದಿಗೆ ಭೇಟಿ ಕೊಡಿ. ನಮ್ಮ ಭಾಷೆ, ಸಂಸ್ಕೃತಿ, ಕಲೆ, ಆಹಾರ ಪದ್ದತಿಯ ಬಗ್ಗೆ ಪರಿಚಯ ಮಾಡಿ ಕೊಡಿ. 

This article is one of the only 16 articles published in AKKA 2016 in the book called "anivaasigaLalli kannada prajne"








No comments:

Post a Comment