Monday, September 19, 2016

ನಶಿಸಿ ಹೊಯ್ತು ಕರ್ನಾಟಕದ "ಬಳೆಗಾರ ಚೆನ್ನಯ್ಯ" ಸಂಸ್ಕೃತಿ...



ಕರ್ನಾಟಕ, ಹಲವಾರು ಭಾರತೀಯ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಂತಹ ರಾಜ್ಯಗಳಲ್ಲಿ ಒಂದು. ಅವುಗಳಲ್ಲಿ ರಂಗೋಲಿ ಇಡುವುದು, ಮಹಿಳೆಯರ ಮೂಗುತಿ, ಯಕ್ಷಗಾನ, ಕೋಲಾಟ ಮುಂತಾದವುಗಳು ಮುಖ್ಯವಾದವುಗಳು. ಮದುವೆ-ಮುಂಜಿಗಳು ಬಂದರೆ ಬಳೆ ಇಡುವುದು ನಮ್ಮ ಹೆಮ್ಮೆಯ ಸಂಸ್ಕೃತಿ ಕೂಡ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯಿಂದಾಗಿ ಮಹಿಳೆಯರು ಪಟ್ಟಣಕ್ಕೆ ಹೋಗಿ ಬಳೆ ಇಟ್ಟು ಬಂದರೂ, ಹಿಂದಿನ "ಬಳೆಗಾರ" ಸಂಸ್ಕೃತಿ ಮರೆಯಲು ಸಾಧ್ಯವೇ? ಮಹಿಳೆಯರೇ ಹಾಗೆ. ಆಭರಣ ಪ್ರಿಯರು. ಇದು ಇಂದು-ನಿನ್ನೆಯದಲ್ಲ. ಅನಾದಿಕಾಲದಿಂದಲೂ ಆಕೆ ಸರ್ವಾಭರಣ ಭೂಷಿತೆ. ಈಗ ಕಾಲ ಬದಲಾಗಿದೆ, ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಆಕೆ ತನಗೆ ಬೇಕಾದ್ದನ್ನು ಪಟ್ಟಣಕ್ಕೆ ಹೋಗಿ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ ಹಿಂದಿನ ಕಾಲ ಹೀಗಿರಲಿಲ್ಲ. ಹಳ್ಳಿಯ ಮಹಿಳೆಯರಿಗೆ ಮನೆಯಿಂದ ಹೊರ ಬರುಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಂತಹ ಕಾಲದಲ್ಲಿ ಬಳೆಗಾರ ಸಂಸ್ಕೃತಿ ಹೆಚ್ಚು ಪ್ರಚಲಿತವಾಗಿತ್ತು. 

ಈ "ಬಳೆಗಾರ"ರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದ್ದಿತ್ತು. ಬಳೆಯನ್ನು ಹೊತ್ತು ಊರೂರು ತಿರುಗುವುದು ಇವರ ಉದ್ಯೋಗ. ಹೆಚ್ಚಿನ ಬಳೆಗಾರರಿಗೆ ಜೀವನಾಂಶ ಕೂಡ  ಇದೇ ಆಗಿರುತ್ತಿತ್ತು. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಇದು ವಂಶಪಾರಂಪರ್ಯವಾಗಿ ಮುಂದುವರೆಲ್ಪಡುತ್ತಿತ್ತು. ಮನುಷ್ಯರಿಗೆ, ಮಾನವೀಯತೆಗೆ ಬೆಲೆ ಕೊಡುತ್ತಿದ್ದ ಕಾಲವದು. ಹೀಗಾಗಿ ಒಬ್ಬ ಬಳೆಗಾರ ಒಮ್ಮೆ ಬಳೆ ಮಾರಲು ಹೊರಟರೆ, ಅವನು ಪುನಃ ಮನೆಗೆ ವಾಪಸಾಗಲು ಹಲವಾರು ದಿನಗಳಾಗುತ್ತಿದ್ದವು. ಅಲ್ಲಿಯವರೆಗೂ ಮನೆ ಮನೆಗೆ ತಿರುಗುವ ಬಳೆಗಾರರಿಗೆ, ಊಟ ಒಬ್ಬರ ಮನೆಯೊಡತಿ ನೀಡಿದರೆ, ವಸತಿ ಇನ್ನೊಂದು ಮನೆಯೊಡೆಯ ನೀಡುತ್ತಿದ್ದರು. ಇದೊಂದು ಸಂಸ್ಕೃತಿಯೊಂದೇ ಅಲ್ಲದೆ, ಸೌಹಾರ್ದ ಮತ್ತು ಮಾನವೀಯ ಸಮಾಜದ ಉದಾಹರಣೆಯನ್ನು ಎತ್ತಿ ತೋರುತ್ತದೆ. 

ಇವಿಷ್ಟೂ ಬಳೆಗಾರರ ಬಗ್ಗೆಯಾದರೆ, ಬಳೆಗಾರರ ದಿನಚರಿ ಹೇಗಿರುತ್ತಿತ್ತು? ಬೆಳಿಗ್ಗೆ ಎದ್ದು ಮನೆಯಲ್ಲಿ ತಿಂಡಿ ಮುಗಿಸಿ, ಭಾರದ ಬಳೆ ಗಂಟನ್ನು ಎತ್ತಿ ಹೊರಡುವ ಬಳೆಗಾರರು ಪ್ರತಿಯೊಂದು ಮನೆ ಎದುರು ನಿಂತು "ಅಮ್ಮಾ ಬಳೆ ಬೇಕಾ" ಎನ್ನುತ್ತಿದ್ದಿದು ಪದ್ದತಿ. ಹಿಂದಿನ ಕಾಲದಲ್ಲಿ ಸಂಚಾರಿ ವ್ಯವಸ್ಥೆ ಇಲ್ಲವಾಗಿರುತ್ತಿದ್ದರಿಂದ ಸಾಮಾನ್ಯವಾಗಿ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬಳೆ ಕೊಳ್ಳುತ್ತಿದ್ದರು. ಕೆಲ ಬಳೆಗಾರರು ಬರೀ ಬಳೆಯೊಂದೇ ಅಲ್ಲದೆ ಅದರ ಜೊತೆ ಮಕ್ಕಳ ಆಟಿಕೆ, ಸರ, ಕಿವಿಯೋಲೆ, ತಲೆಗೆ ಹಾಕುವ ಕ್ಲಿಪ್, ಪಟ್ಟಿ ಹೀಗೆ ವಿಧ ವಿಧ ವಸ್ತುಗಳನ್ನು ಹೊತ್ತು ಬರುತ್ತಿದ್ದರು. ಬಳೆಗಾರ ಬಂದರೆ ಮಕ್ಕಳಿಗಂತೂ ಸಂಭ್ರಮವೋ ಸಂಭ್ರಮ. ಅದೂ ಅಪ್ಪ ಇಲ್ಲದ ಸಮಯದಲ್ಲಿ ಬಳೆಗಾರ ಬಂದರೆ ಸ್ವರ್ಗ. ಯಾಕೆಂದರೆ ಅಮ್ಮ ಕೂಡಿಟ್ಟ ಅಲ್ಪ ಸ್ವಲ್ಪ ದುಡ್ಡಿಂದ ಕಂಡದ್ದೆಲ್ಲ ಹಠ ಬಿದ್ದು ಕೊಡಿಸಿಕೊಳ್ಳಬಹುದಲ್ಲ. ಮನೆಗೆ ಬಂದ ಬಳೆಗಾರನಿಗೆ ದಣಿವಾರಿಸಿಕೊಳ್ಳಲು ಪಾನೀಯ ಕೊಟ್ಟ ಮನೆಯೊಡತಿ ಬಳೆ ನೋಡಲು ಕೂರುತ್ತಿದ್ದಳು. ತನಗಿಷ್ಟವಾದ ಬಳೆ ಮತ್ತು ಮಕ್ಕಳಿಗೆ ಬೇಕಾದ್ದು ತೆಗೆದುಕೊಂಡ ನಂತರ ಹಣ ನೀಡಿ, ಬಳೆಗೆ ಅರಿಶಿನ-ಕುಂಕುಮ ಹಾಕಿ ನಮಸ್ಕರಿಸಿ ಕಳಿಸುವುದು ನಮ್ಮ ಸಂಸ್ಕೃತಿ. ಯಾಕೆಂದರೆ ನಾವು ನಿಸರ್ಗವನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತೇವಲ್ಲವೇ? 

ಇದಲ್ಲದೇ, ಸಾಮಾನ್ಯವಾಗಿ ಮದುವೆ-ಮುಂಜಿಯ ಹಿಂದಿನ ದಿನ ಬಳೆಗಾರರನ್ನು ಕರೆಸುವ ಪದ್ದತಿ ನಮ್ಮಲ್ಲಿತ್ತು. ಕೆಲವೊಮ್ಮೆ ಮನೆಯೊಡೆಯನಿಗೇ ಕರೆಸಲಾಗದಿದ್ದರೂ, ಬಳೆಗಾರರೇ ಸೀಮೆಯಲ್ಲಿ ಕಾರ್ಯಕ್ರಮವಿದೆ ಎಂದು ತಿಳಿದಾಗ ಬರುತ್ತಿದ್ದರು. ಅದೊಂದು ನಮ್ಮ ಹೆಮ್ಮೆಯ ಸಂಸ್ಕೃತಿ. ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ತವರಿಗೆ ಬರುತ್ತಿದ್ದ ಹೆಣ್ಣು ಮಕ್ಕಳಿಗೆ ಕೈ ತುಂಬಾ ಬಳೆ ಇಡಿಸುವುದು ಕ್ರಮ. ಆ ಹಬ್ಬದ ವಾತಾವರಣದಲ್ಲಿ ಬಳೆಗಾರನ ಸುತ್ತ ಕುಳಿತ ಹೆಣ್ಣು ಮಕ್ಕಳನ್ನು ನೋಡುವುದೇ ಒಂದು ರೀತಿಯ ಸಂಭ್ರಮ. ಇನ್ನು ಬಳೆಗಾರರಿಗಂತೂ ಭರ್ಜರಿ ವ್ಯಾಪಾರದ ಜೊತೆ, ಹೊಟ್ಟೆ ತುಂಬಾ ವಿಶೇಷದೂಟ. 

ಆಧುನಿಕತೆಗೆ ತಕ್ಕಂತೆ ನಾವು-ನೀವೆಲ್ಲರೂ ನಮ್ಮ ವಂಶಪಾರಂಪರ್ಯವಾಗಿ ಬಂದಂತಹ ಉದ್ಯೋಗಗಳನ್ನು ಬಿಟ್ಟು, ಪಟ್ಟಣಕ್ಕೆ ವಲಸೆ ಬಂದಿದ್ದೇವೆ.  ಮಾನವೀಯತೆ, ಸೌಹಾರ್ದತೆಗಳು ಸಮಾಜದಲ್ಲಿ ಮರೆಯಾಗುತ್ತಿವೆ. ಹಾಗೆಯೇ ಬಳೆಗಾರರು ಕೂಡ ಮರೆಯಾಗಿದ್ದಾರೆ. ನಮ್ಮ ತಲೆಮಾರಿನವರು ಅವರ ಬಗ್ಗೆ ಕಂಡಿದ್ದೇವೆ, ಕೇಳಿದ್ದೇವೆ. ನಮ್ಮ ಮಕ್ಕಳಿಗೆ ಖಂಡಿತಾ ಇದರ ಬಗ್ಗೆ ಗೊತ್ತಿರಲೂ ಸಾಧ್ಯವಿಲ್ಲ. ನಮ್ಮ ಹಲವಾರು ಜಾನಪದ ಗೀತೆಗಳಲ್ಲಿ ಬಳೆಗಾರರ ಬಗ್ಗೆ ಉಲ್ಲೇಖವಿದೆ. ಹಲವಾರು ಜಾನಪದ ಕಥೆಗಳಲ್ಲಿ ಬಳೆಗಾರ ಕಥಾ ನಾಯಕನಾಗಿದ್ದಾನೆ. ಮುಂದಿನ ಪೀಳಿಗೆಗೆ ನಾವು ಇಂತಹ ಸಂಸ್ಕೃತಿಯ ಬಗ್ಗೆ ಹಾಡು, ಕಥೆಗಳಲ್ಲಷ್ಟೇ ತಿಳಿಸಲು ಸಾಧ್ಯ. ಇಂತಹ ಹಲವಾರು ನಮ್ಮ ಹೆಮ್ಮೆಯ ಸಂಸ್ಕೃತಿಗಳನ್ನು ನಾವು ಕಳೆದುಕೊಳ್ಳುತ್ತಿರುವುದು ನಮ್ಮೆಲ್ಲರ ವಿಪರ್ಯಾಸ.  

This article was published in TimesKannada news paper http://timeskannada.com/?p=6061


This Article was also published in Malenadu Mitra news paper 







No comments:

Post a Comment