Wednesday, February 28, 2018

....ಮಲೆನಾಡಿನ ಮಳೆ....


ಬಹುಷಃ ಪ್ರತಿಯಾಬ್ಬರಿಗೂ "ಮಲೆನಾಡು" ಎಂದರೆ ಮಳೆಯನ್ನು ಹೊರತು ಬೇರಾವ ನೆನಪು ಬರಲು ಸಾದ್ಯವಿಲ್ಲ. ಹೆಸರೇ ಹೇಳುವಂತೆ ಇದು ಮಳೆಯ ನಾಡು - ಮಲೆನಾಡು. ಮಲೆನಾಡ ಮಡಿಲಲ್ಲಿ ಬೆಳೆದ ನನಗೆ ಮತ್ತು ಮಳೆಗೆ ಅವಿನಾಭಾವ ಸಂಭಂದ. ನನ್ನ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕಿದಾಗ ಮಳೆಯದ್ದೇ ಮುಖ್ಯ ಪಾತ್ರ.



ಅದೆಷ್ಟೋ ದಿನ ಮಳೆಯಲ್ಲಿ ಆಡಿ ಕುಣಿದಿದ್ದಿದೆ, ಅದೆಷ್ಟೋ ಭಾರಿ ಮಲೆನಾಡ ಇಳಿ ಜಾರಿನ ಪ್ರದೇಶಗಳಲ್ಲಿ ಜಾರಿ ಬಿದ್ದಿದ್ದಿದೆ, ಮಳೆಯಲ್ಲಿ ಆಡಿದ ನೀರಾಟ ಮರೆಯಲಸಾಧ್ಯ. ಸಾಮಾನ್ಯವಾಗಿ ಎಲ್ಲ ಮಕ್ಕಳಿಗೆ ದಸರಾ ಮತ್ತು ಬೇಸಿಗೆ ರಜಾದಿನಗಳ ಅನುಭವವಾಗುತ್ತಿದ್ದರೆ, ಮಲೆನಾಡಿನವರಾದ ನಮಗೆ ಮಳೆಗಾಲದ ರಜೆ ಸಿಗುತ್ತಿತ್ತು.  ಇನ್ನು ಮೇ ತಿಂಗಳು ಬಂತೆಂದರೆ ಹಿಂಗಾರಿನ ಆರ್ಭಟ ಭಯ ತರಿಸುತ್ತಿತ್ತು. ಅದೊಂಥರಾ ಅಮೆರಿಕಾದ ದಕ್ಷಿಣ ಭಾಗದ  Tornodo ಅನುಭವ - ಕಾರ್ಮೋಡದ ನಡುವಿನ ಜೀವನ. ಇನ್ನು ಜೂನ್ ಬಂತೆಂದರೆ ನಮ್ಮ ಮುಂದಿನ ಮೂರೂ ತಿಂಗಳು ಹನಿಗಳೊಂದಿಗಿನ ಚೆಲ್ಲಾಟ. ಹಚ್ಚ ಹಸಿರುಟ್ಟ ಪ್ರಕೃತಿಯನ್ನು ನೋಡುವುದೇ ಕಣ್ಣಿಗೆ ಹಬ್ಬ, ಅದರಲ್ಲೂ ಅದರೊಂದಿಗಿನ ಜೀವನ ಮರೆಯಲಾಗದ ಅನುಭವ.


ಚಿಟ-ಪಟ ಸದ್ದಿನಿಂದ ಆರಂಭವಾಗಿ ಧೋ ಎಂಬ ತಾರಕಕ್ಕೇರಿ ಮತ್ತೆ ಚಿಟ-ಪಟದೊಂದಿಗೆ ಮುಕ್ತಾಯ. ಅದೊಂದು ಹೇಳಲಾರದ, ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಸುಂದರ ಪ್ರತಿಕ್ರಿಯೆ. ಮಳೆಯೇ ಹಾಗೆ ಎಂಥಹ ಕಲ್ಲು ಮನಸ್ಸಿನವರನ್ನು ಮೃದುವಾಗಿಸಿ ಬಿಡುತ್ತದೆ, ತನ್ನೊಳಗೆ ಅವರೂ ಹರ್ಷ ಪಡುವಂತೆ ಮಾಡುತ್ತದೆ. ಮನಸ್ಸು ಸೃಷ್ಟಿಯೋಡಲಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಮೊದ-ಮೊದಲ ತುಂತುರು ಮಳೆಯೊಂದಿಗೆ ಬರುವ ಆ ಮಣ್ಣಿನ ಪರಿಮಳಕ್ಕೆ ಆಧುನಿಕ ಜಗತ್ತಿನ ಯಾವೊಂದು ಪರಿಮಳ ದ್ರವ್ಯವು ಪೈಪೋಟಿ ನೀಡಲಾಗದು.


ಮಳೆ ಸುಂದರ ಪ್ರಕೃತಿಯ ವಿಶೇಷ ಪ್ರತಿಕ್ರಿಯೆಯಾದರೆ, ಮಳೆಗೆ ಮಲೆನಾಡಿನ ಜನರ ಪ್ರತಿಕ್ರಿಯೆಯೇ ಬೇರೆ. ಮಳೆಯಲ್ಲಿ ನೆನೆದು ಬಂದು ನಂತರ ಹಂಡೆಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವುದು. ಅದಾದ ಮೇಲೆ ಬೇಯಿಸಿದ ಹಲಸಿನ ಬೀಜ, ಹಲಸಿನ ಹಪ್ಪಳದೊಂದಿಗೆ ಕೈಗೂ ಬಾಯಿಗೂ ಕಚ್ಚಾಟ. ಬಿಸಿ ಬಿಸಿ ಆರೋಗ್ಯಕರ ಕಷಾಯವಂತೂ ಸದಾ ಸಿದ್ದ. ಇನ್ನು ಬಿಸಿ ಮಜ್ಜಿಗೆ ಹುಳಿ, ಪತ್ರೊಡೆ, ಹಲಸಿನ ಚಿಪ್ಸ್ ಇವೆಲ್ಲದರ ಮಳೆಗಾಲದ ಗೆಳೆತನ ಅವಿನಾಭಾವ. ಇದೆಲ್ಲದರೊಂದಿಗೆ, ಹೊತ್ತಿಲ್ಲದ ಹೊತ್ತಿನಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗುವುದು - ಪ್ರಪಂಚದಲ್ಲಿ ಇದರಷ್ಟು ಸುಖ ಇನ್ನೊಂದಿಲ್ಲ.



ಇನ್ನು, ಮಳೆನಿಂತ ಮೇಲೆ ಹೇಳುವುದೇ ಬೇಡ, ಅದೊಂದು ವಿಭಿನ್ನ ಅನುಭವ. ಸುಂದರ ಹಸಿರು ಸೀರೆಯುಟ್ಟ ಯುವತಿಯಾಗಿರುತ್ತಾಳೆ "ನಿಸರ್ಗೆ". ಪ್ರತಿಯೊಂದು ಎಲೆಯ ಮೇಲೂ ಹನಿ ಹನಿಯಾಗಿ ಗುರುತು ಮೂಡಿಸಿಟ್ಟಿರುತ್ತಾಳೆ "ವರ್ಷಧಾರೆ". ಜೇಡನ ಬಲೆಯಲ್ಲಿ ಸಿಕ್ಕಿಕೊಂಡಿರುವ ಹನಿಗಳು ಪೋಣಿಸಿದ ಮುತ್ತಿನ ಮಣಿಗಳಂತೆ ಕಂಗೊಳಿಸುತ್ತವೆ. ಅದೆಷ್ಟೋ ಜಾತಿಯ ವಿಧ ವಿಧದ ಪುಷ್ಪ ರಾಶಿ ಜೀವ ಕಂಡುಕೊಳ್ಳುತ್ತದೆ. ಅಣಬೆಗಳಂತೂ ಬೇರೆಯ ಪ್ರಪಂಚವನ್ನೇ ಸೃಷ್ಟಿಸಿರುತ್ತವೆ.



ಆಧುನಿಕತೆ ಬೆಳೆದಂತೆ ಮನುಷ್ಯ ಮುಗ್ಧ ಪ್ರಪಂಚದಿಂದ ಪಟ್ಟಣದೆಡೆಗೆ ತನ್ನ ವಾಸ್ತವ್ಯ ಬದಲಿಸುತ್ತಿದ್ದಾನೆ. ದುರಾದೃಷ್ಟವಷತ್, ನಾವು-ನೀವು ಪ್ರತಿಯಾಬ್ಬರೂ ಆ ಮಲೆನಾಡ ವರ್ಷಧಾರೆಯ ಹರ್ಶೋದ್ಗಾರವನ್ನು ಕೇವಲ ದೂರದರ್ಶನದಲ್ಲಿ ವೀಕ್ಷಿಸುವಂತಾಗಿದೆ. ಐದು ನಿಮಿಷ ಸುರಿವ ತುಂತುರು ಮಳೆಯೊಂದಿಗೆ ನಮ್ಮ ಮನಸ್ಸು ರಾಜಿಯಾಗುವಂತಾಗಿದೆ. ಆದರೂ ಮಳೆ ಬರುವಾಗ ಮನಸ್ಸು ಮಲೆನಾಡ ಮಳೆಯನ್ನೇ ಯೋಚಿಸುತ್ತಿರುತ್ತದೆ,
"ಗಗನದಲಿ ಮಳೆಯದಿನ
ಗುಡುಗಿನ ತನನ
ಆ ತನನ ದಿನ ಧರಣಿಯಲಿ, ಹಸಿರಿನ ಜನನ...
ಮಲೆನಾಡಿನ ......
ಮಳೆ ಹಾಡಿನ .........
ಪಿಸುಮಾತಿನ..
ಹೊಸತನಾ... .
ಸವಿದೆನಾ ...... " ಎಂಬಂತೆ.

Monday, February 19, 2018

Canvas Painting: Beyond Everything


Wednesday, March 15, 2017

ಸುಗ್ಗಿ ಸಂಭ್ರಮದ ಸುಂದರ ಹಬ್ಬ - ಸಂಕ್ರಾಂತಿ


ಸಂಕ್ರಾಂತಿ ಅಥವಾ ಸುಗ್ಗಿಯ ಹಬ್ಬ ಭಾರತದ ಬಹು ಭಾಗಗಳಲ್ಲಿ ಆಚರಿಸುವ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲ್ಪಡುವ ಈ ಹಬ್ಬವನ್ನು, ಸಂಕ್ರಾಂತಿ ಎಂದು ಕರ್ನಾಟಕ, ಆಂಧ್ರ, ತೆಲಂಗಾಣ, ಬಿಹಾರ್, ಝಾರ್ಖಂಡ್ ಮುಂತಾದ ಹಲವಾರು ರಾಜ್ಯಗಳಲ್ಲಿ ಕರೆಯುತ್ತಾರೆ. ಸಂಕ್ರಾತಿ ಪದದ ನಿಜವಾದ ಅರ್ಥ "ಚಲನ". ಜೀವವಿರುವ ಪ್ರತಿಯೊಂದು ವಸ್ತುವೂ ಚಲಿಸಲೇಬೇಕು. ನಮ್ಮ ಹಿರಿಯರು ನಮಗಿಂತ ಮೊದಲು ಚಲಿಸಿದರೆ, ನಮಗಿಂತ ಕಿರಿಯರು ನಮ್ಮ ಚಲನಕ್ಕೆ ಕಾಯುತ್ತಾರೆ. ಭೂ ಮಂಡಲ ಚಲಿಸುವಾಗ ಅದಕ್ಕನುಸಾರವಾಗಿ ಜೀವಿಗಳನ್ನು ತರಬೇತಿ ನೀಡುತ್ತದೆ. ಚಲನೆ ಒಂದು ಹಂತದವರೆಗೆ ಸುಖಕರವಾಗಿರುತ್ತದೆ. ನಿಧಾನವಾಗಿ ಋತುಗಳನ್ನು ಬದಲಿಸುತ್ತಾ ಚಲಿಸುವ ಭೂಮಿ, ಒಂದೇ ಭಾರಿಗೆ ರಭಸವಾಗಿ ಚಲಿಸಲಾರಂಭಿಸಿದರೆ ನಮ್ಮ ಗತಿ ದೇವರೇ ಬಲ್ಲ. ಆದ್ದರಿಂದ ಯಾವುದೇ ಚಲನೆಗೆ ಪರಿಮಿತಿಯ ಅವಶ್ಯಕತೆ ತುಂಬಾ ಇದೆ.

ಮಕರ ಸಂಕ್ರಾತಿಯ ವೈಶಿಷ್ಟ್ಯ:
ರಾಶಿಚಕ್ರದ ಮಹತ್ತರ ಬದಲಾವಣೆಯೇ ಮಕರ ಸಂಕ್ರಾಂತಿಯ ಮಹತ್ವ. ಈ ರಾಶಿಚಕ್ರದಲ್ಲಾಗುವ ಮಹತ್ತರ ಬದಲಾವಣೆಯನ್ನು ಭೂ ಮಂಡಲದಲ್ಲಿರುವ ನಾವು ನೀವೆಲ್ಲರೂ ಖಂಡಿತ ಅನುಭವಿಸಿದ್ದೇವೆ. ಇಂತಹ ಹಲವಾರು ಸಂಕ್ರಾಂತಿಗಳು ವರ್ಷವಿಡೀ ಬಂದರೂ, ಮಕರ ಸಂಕ್ರಾಂತಿ ಮತ್ತು ಅದರ ವಿರುದ್ಧ ಏರ್ಪಡುವ ಕರ್ಕ ಸಂಕ್ರಾಂತಿಗಳಲ್ಲಿ ರಾಶಿ ಚಕ್ರದ ಬದಲಾವಣೆಗಳು ಮಹತ್ತರ. ಮಕರ ಸಂಕ್ರಾಂತಿಯಂದು ಸೂರ್ಯ ಭೂಮಿಯ ಉತ್ತರಭಾಗದೆಡೆ ಬರುವುದರಿಂದ ಇದನ್ನು ಉತ್ತರಾಯಣವೆನ್ನುತ್ತಾರೆ (ಉತ್ತರ + ಅಯನ ). ಕರ್ಕ ಸಂಕ್ರಾಂತಿಯ ನಂತರ ಸೂರ್ಯ ಭೂಮಿಯ ದಕ್ಷಿಣದೆಡೆ ಕಂಡು ಬರುವುದರಿಂದ ಇದನ್ನು ದಕ್ಷಿಣಾಯಣವೆಂದೂ ಕರೆಯುತ್ತಾರೆ. ಭಾರತೀಯರಿಗೆ ಮಕರ ಸಂಕ್ರಾಂತಿಯ ನಂತರ ಸೂರ್ಯ ಸನಿಹವಾಗುವುದರಿಂದ ಬೆಳಕಿನ ಪ್ರಭಾವಳಿ ಜಾಸ್ತಿ.

ರವೇಃ ಸಂಕ್ರಮಣಂ ರಾಶೌ  ಸಂಕ್ರಾಂತಿರಿತಿ ಕಥ್ಯತೇ।
ಸ್ನಾನದಾನತಪಃಶ್ರಾದ್ಧಹೋಮಾದಿಷು ಮಹಾಫಲಾ।।
ಮೇಷಾದಿಷು ದ್ವಾದಶರಾಶಿಷು ಕ್ರಮೇಣ ಸಂಸಾರತಃ ಸೂರ್ಯಸ್ಯ 
ಪೂರ್ವಸ್ಮಾದ್ರಾಶೇಃ ಉತ್ತರರಾಶೌ ಸಂಕ್ರಮಣಂ ಪ್ರವೇಶಃ ಸಂಕ್ರಾಂತಿಃ ।

ಒಂದು ರಾಶಿಯಿಂದ ಮುಂದಿನ ರಾಶಿಗೆ ರವಿಯ ಪ್ರವೇಶವನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಆ ಮುಹೂರ್ತದಲ್ಲಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿ ಆಚರಣೆಗಳನ್ನು ಮಾಡಿದರೆ ಮಹಾಫಲ ಪ್ರಾಪ್ತವಾಗುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಪ್ರವೇಶ ಮಾಡುವುದಲ್ಲದೇ ಗ್ರಹಗಳು, ನಕ್ಷತ್ರ ಮತ್ತು ರಾಶಿಗಳಲ್ಲಿ ಪ್ರವೇಶ ಮಾಡುವುದು ಕೂಡ ಸಂಕ್ರಾಂತಿ ಪುಣ್ಯಕಾಲದಲ್ಲಿಯೇ. ಆದರೂ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದನ್ನೇ ವಿಶೇಷವಾಗಿ ಸಂಕ್ರಾಂತಿಯೆಂದು ಕರೆಯುವುದು ರೂಢಿಯಾಗಿದೆ

ಕಾಲವೊಂದಿತ್ತು ಮಾನವ ಭೂಮಿಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಹಾಗೆ ತಿನ್ನಲಷ್ಟೆ ಕಲಿತಿದ್ದ. ಕಾಲ ಮುಂದುವರಿದಂತೆ ತನ್ನ ಆಹಾರವನ್ನು ತಾನೇ ತಯಾರಿಸಲು ಕಲಿತ. ತಯಾರಿಸುವ ಕಲಿಕಾ ವಿಧಾನದಲ್ಲಿ, ಕೃಷಿ ಮಾಡುವುದನ್ನೂ ಕಲಿತ. ಮಾನವನಿಗೆ ಹುಡುಕಿ ತಿನ್ನುವಾಗ ಇರುವುದಷ್ಟೇ ಉಪಯೋಗಿಸಲು ಗೊತ್ತಿತ್ತು. ಕೃಷಿಯೊಂದಿಗೆ ತನಗೆ ಬೇಕಾದ್ದನ್ನು ತಯಾರಿಸಿಕೊಳ್ಳುವ ವಿಧಾನವನ್ನು ಕಲಿತುಕೊಂಡ. ನಾವು ಮಗುವಾದಾಗ ತಾಯಿ ಕೊಟ್ಟಿದ್ದನ್ನಷ್ಟೇ ತಿನ್ನಲು ಗೊತ್ತಿರುತ್ತದೆ, ಬೆಳೆಯುತ್ತಾ ಹೋದಂತೆ ನಾವು ಸ್ವಾವಲಂಬಿಗಳಾಗುತ್ತೇವೆ - ಇದೊಂದು ಮಾನವ ಕುಲದ ಬದಲಾವಣೆಗೆ ಸಂಕ್ಷಿಪ್ತ ಪರ್ಯಾಯಾವಲೋಕನ. ಸ್ವಾವಲಂಬಿಗಳಾದಂತೆ ಹೇಗೆ ತಾಯಿಯ ಮಡಿಲಿಂದ ದೂರ ಸರಿಯುತ್ತೇವೆಯೋ ಹಾಗೆಯೇ ಆಧುನಿಕತೆ ಬೆಳೆದಂತೆ ಮಾನವ ನಿಸರ್ಗದ ಮಡಿಲಿಂದ ಖಂಡಿತ ದೂರ ಸರಿಯುತ್ತಿದ್ದಾನೆ. "ಸಂಕ್ರಾಂತಿ" ಕೃಷಿ ಅವಲಂಬಿತ  ಕುಟುಂಬಗಳಿಗೆ ಭೂಮಿಯನ್ನು ವಂದಿಸುವ ದಿನವಾಗಿ ಉಳಿದಿದೆ.

ಸುಗ್ಗಿ ಹಬ್ಬ "ಸಂಕ್ರಾಂತಿ":
ಸಂಕ್ರಾಂತಿಯನ್ನು ಸುಗ್ಗಿ ಹಬ್ಬವೆಂದು ಕರೆಯಲು ಮುಖ್ಯವಾದ ಕಾರಣ "ಕೊಯ್ಲು ಮುಕ್ತಾಯ". ಆದ್ದರಿಂದ ಇದರ ಸಂಭ್ರಮಾಚರಣೆ ಜೋರಾಗಿರುತ್ತದೆ. ಸಂಕ್ರಾಂತಿ ಕೊಯ್ಲು ಮುಕ್ತ್ಯದೊಂದಿಗೆ ಚಳಿಗಾಲದ ಅಂತ್ಯವನ್ನೂ ಸೂಚಿಸುತ್ತದೆ.  ರೈತ ಈ ದಿನ ಎತ್ತು, ದನ, ಬೆಳೆದ ಆಹಾರ ಮತ್ತು ಭೂಮಿಯನ್ನು ದೇವರೆಂದು ಪೂಜಿಸುತ್ತಾನೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಆಚರಿಸುವ ಈ ಹಬ್ಬವನ್ನು ಮೊದಲನೇ ದಿನ ಭೂಮಿಗೆ, ಎರಡನೇ ದಿನ ತಮಗೆ ಮತ್ತು ಮೂರನೇ ದಿನ ಜಾನುವಾರುಗಳಿಗೆ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಪಟ್ಟಣಕ್ಕೆ ವಲಸೆಗೊಂಡ ಮಾನವರೊಂದಿಗೆ ಹೋಲಿಸಿದಲ್ಲಿ ರೈತಾಪಿ ವರ್ಗ ವರ್ಷದ ಒಂದು ದಿನವನ್ನಾದರೂ ಭೂಮಿ ಮತ್ತು ಪಶು ಪಕ್ಷಿಗಳಿಗೆ ಮೀಸಲಿಡು
ವುದು ಪ್ರಶಂಸನೀಯ.

ಸಂಕ್ರಾಂತಿ ಹಳ್ಳಿಗಳಲ್ಲಿ ಸುಗ್ಗಿಯ ಹಬ್ಬವಾದರೆ, ಪಟ್ಟಣಗಳಲ್ಲಿ ಎಳ್ಳು ಬೀರುವ ಹಬ್ಬವಾಗಿ ಪ್ರಚಲಿತವಾಗಿದೆ. ಎಳ್ಳು ಬೆಲ್ಲವನ್ನು ಹೆಂಗಳೆಯರು ಮನೆ ಮನೆಗೆ ಹೋಗಿ ವಿನಿಮಯಗೊಳಿಸುತ್ತಾರೆ. ಮದುವೆಯಾದ ಹೆಣ್ಣುಮಕ್ಕಳು ಮತ್ತೈದೆಯರಿಗೆ ಬಾಗಿನ ಕೊಟ್ಟು ಹಬ್ಬವನ್ನಾಚರಿಸುತ್ತಾರೆ. ಹುಗ್ಗಿ ಮತ್ತು ವಿಭಿನ್ನ ರಂಗೋಲಿಗಳು ಹಬ್ಬದ ಮತ್ತೊಂದು ವೈಶಿಷ್ಟ್ಯ. ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಪದ್ದತಿಯಿರುವುದರಿಂದ ಮಕ್ಕಳು ಮತ್ತು ದೊಡ್ಡವರಿಗೆ ಇದೊಂದು ಮನೋರಂಜನೆಯ ಹಬ್ಬ ಕೂಡ.

ಹಬ್ಬ ಯಾವುದೇ ಇರಲಿ, ಅದಕ್ಕೊಂದು ವಿಶೇಷವಿದ್ದೇ ಇರುತ್ತದೆ. ಬರಿ ಆಚರಣೆಯೊಂದೇ ಅಲ್ಲದೆ ಅದರ ವಿಶೇಷತೆಯನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ತಿಳಿದುಕೊಂಡ ವಿಷಯದೊಂದಿಗೆ, ನಮ್ಮ ಆಚಾರ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಜವಾಬ್ದಾರಿ. ಸಂಕ್ರಾಂತಿ ಹಬ್ಬದೊಂದಿಗೆ "ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡೋಣ".

This article bagged first place at "MILANA ADULT ESSAY COMPETITION - 2017"

Monday, December 19, 2016

ಇನ್ನಿಲ್ಲವಾಯಿತೇ ಆ.... ಹಕ್ಕೀ ಗೂಡು.



ಕಾಲವೊಂದಿತ್ತು, ಮಲೆನಾಡಿನ ಮುಚ್ಚಿಗೆ ಮನೆಗಳ ಜಗುಲಿಯಲ್ಲಿ ಒಂದು ಗೂಡಿರುತ್ತಿತ್ತು. ಏಕಿರಬಹುದು ಈ ಗೂಡುಗಳು? ಸದಾ ಚಿಲಿ-ಪಿಲಿ ಕಲರವ ಕೇಳಿಸುವ ಗುಬ್ಬಿಗಳಿಗಾಗಿ. ಹೀಗೆ ಸಾಮಾನ್ಯ ಎಲ್ಲರ ಮನೆಯ ಜಗಲಿಯಲ್ಲಿ ಗುಬ್ಬಿ ಸಪ್ಪಳ ಕೇಳುತ್ತಿತ್ತು. ಇನ್ನು ಮನೆಯೊಡತಿಯೋ, ಮನೆಯೊಡೆಯನೋ ಆಚೀಚೆ ಓಡಾಡುವಾಗ ಜಗುಲಿಯಲ್ಲಿ ಅಕ್ಕಿ ಬೀರುವ ಅಭ್ಯಾಸ.  ಗುಬ್ಬಚ್ಚಿಗಳಿಗೇನು ಕೆಲಸ ಅಕ್ಕಿ ಹೆಕ್ಕಿ ತಿನ್ನುವುದು. ಅದೆಷ್ಟೋ ಭಾರಿ ಗುಬ್ಬಚ್ಚಿ ಮೊಟ್ಟೆಗಳಿಗಾಗಿ ಹಾವುಗಳ ಹಾವಳಿ ಮನೆಯವರಿಗಾದ ಅನುಭವಗಳಿವೆ. ಇತ್ತೀಚಿನ ದಿನಗಳಲ್ಲಿ ನಾವು ಗುಬ್ಬಚ್ಚಿಗಳನ್ನು ಅಷ್ಟೊಂದು ನೋಡುತ್ತಿಲ್ಲ. ಹಾಗಾದರೆ ಗುಬ್ಬಿಗಳೆಲ್ಲ ಎಲ್ಲಿ ಹೋದವು?

ಕಾಲ ಮುಂದುವರಿದಂತೆ, ಆಧುನಿಕತೆ ಹೆಚ್ಚಾಗುತ್ತಿದೆ. ಆಧುನಿಕತೆಯೆಡೆ ದಾಪುಗಾಲಿಡುತ್ತಿರುವ ಮಾನವನಿಗೆ ಗುಬ್ಬಚ್ಚಿ ಕಲರವ ಮರೆತೇ ಹೋಗಿದೆ. ಗುಬ್ಬಚ್ಚಿಯೊಂದೇ ಅಲ್ಲದೆ, ಮುಂಜಾನೆಯ ಕೋಳಿ ಕೂಗು, ಸುಪ್ರಭಾತ, ರೇಡಿಯೋದಲ್ಲಿ ಬರುತ್ತಿದ್ದ ಬೆಳಗಿನ ವಾರ್ತೆಗಳು, ಮನೆ ಹೊರಗೆ ಹಸುವಿಗೆ ಕುಡಿಯಲೆಂದೇ ಶೇಖರಿಸುತ್ತಿದ್ದ ಬಾನಿಯೊಳಗಿನ ನೀರು ಒಂದೇ, ಎರಡೇ? ಅವೆಲ್ಲ ಇಂದಿಗೆ ನೆನಪುಗಳಗಷ್ಟೇ ಆಗಿ ಉಳಿದಿವೆ.

ಗುಬ್ಬಚ್ಚಿಗಳು ಬರೀ ಮಲೆನಾಡು ಅಥವಾ ಭಾರತಕ್ಕಷ್ಟೇ ಸೀಮಿತವಲ್ಲದೆ, ಪ್ರಪಂಚದ ಹಲವಾರು ಭಾಗಗಳಲ್ಲಿ ನಾವು ಕಾಣಬಹುದು. ಗುಬ್ಬಚ್ಚಿ ಅಥವಾ ಸ್ಪ್ಯಾರೋಗಳಲ್ಲಿ (ಆಂಗ್ಲ ಭಾಷೆಯಲ್ಲಿ) ಹಲವಾರು ವಿಧಗಳಿವೆ. ಪ್ರದೇಶ, ವಾಸಕ್ಕನುಗುಣವಾದ ಹವಾಮಾನ ಮತ್ತು ದೇಹ ರಚನೆಗನುಗುಣವಾಗಿ ಹಲವಾರು ಹೆಸರುಗಳಲ್ಲಿ ವಿಂಗಡಿಸಲಾಗಿದೆ. ಹೌಸ್ ಸ್ಪ್ಯಾರೋ, ಇಟಾಲಿಯನ್ ಸ್ಪ್ಯಾರೋ, ಸ್ಪ್ಯಾನಿಷ್ ಸ್ಪ್ಯಾರೋ, ಸಿಂದ್ ಸ್ಪ್ಯಾರೋ, ರುಸ್ಸೆಟ್ ಸ್ಪ್ಯಾರೋ, ಡೆಡ್ ಸೀ ಸ್ಪ್ಯಾರೋ, ಕೀನ್ಯಾ ಸ್ಪ್ಯಾರೋ, ಪ್ಯಾರೋಟ್ ಬಿಲ್ಲ್ಡ್ ಸ್ಪ್ಯಾರೋ ಹೀಗೆ ಹತ್ತು ಹಲವು.
ವೈಜ್ಞಾನಿಕ ವಿಂಗಡನೆ
Kingdom: Animalia
Phylum:        Chordata
Class:        Aves
Order:        Passeriformes
Suborder:        Passeri
Infraorder: Passerida
Superfamily: Passeroidea
Family:        Passeridae

ಗುಬ್ಬಚ್ಚಿಗಳ ಪ್ರಭೇದಗಳು ಈ ಕೆಳಕಂಡಂತಿವೆ:
Hypocryptadius
Cinnamon ibon
Passeridae, (true sparrows)
Saxaul sparrow, Passer ammodendri
House sparrow, Passer domesticus
Italian sparrow, Passer italiae
Spanish sparrow, Passer hispaniolensis
Sind sparrow, Passer pyrrhonotus
Somali sparrow, Passer castanopterus
Russet sparrow, Passer rutilans
Plain-backed sparrow, Passer flaveolus
Dead Sea sparrow, Passer moabiticus
Iago sparrow, Passer iagoensis
Great sparrow, Passer motitensis
Kenya sparrow, Passer rufocinctus
Kordofan sparrow, Passer cordofanicus
Shelley's sparrow, Passer shelleyi
Socotra sparrow, Passer insularis
Abd al-Kuri sparrow, Passer hemileucus
Cape sparrow, Passer melanurus
Northern grey-headed sparrow, Passer griseus
Swainson's sparrow, Passer swainsonii
Parrot-billed sparrow, Passer gongonensis
Swahili sparrow, Passer suahelicus
Southern grey-headed sparrow, Passer diffusus
Desert sparrow, Passer simplex
Eurasian tree sparrow, Passer montanus
Sudan golden sparrow, Passer luteus
Arabian golden sparrow, Passer euchlorus
Chestnut sparrow, Passer eminibey
Petronia, the petronias (rock sparrows)
Yellow-spotted petronia, Petronia pyrgita
Yellow-throated sparrow, Petronia xanthocollis
Yellow-throated petronia, Petronia superciliaris
Bush petronia, Petronia dentata
Rock sparrow, Petronia petronia
Carpospiza
Pale rockfinch, Carpospiza brachydactyla
Montifringilla, (snowfinches)
White-winged snowfinch, Montifringilla nivalis
Black-winged snowfinch, Montifringilla adamsi
White-rumped snowfinch, Montifringilla taczanowskii
Père David's snowfinch, Montifringilla davidiana
Rufous-necked snowfinch, Montifringilla ruficollis
Plain-backed snowfinch, Montifringilla blanfordi
Afghan snowfinch, Montifringilla theresae



ಸದ್ದಿಲ್ಲದೇ ಮರೆಯಾಗುತ್ತಿರುವ ಈ ಪುಟ್ಟ ಪಕ್ಷಿಗಳು ಬರೀ ಭಾರತವೊಂದೇ ಅಲ್ಲದೆ ಎಲ್ಲ ಪ್ರದೇಶಗಳಲ್ಲೂ ಮಾಯವಾಗುತ್ತಿವೆ. RSPB, UK ಹೌಸ್ ಸ್ಪ್ಯಾರೋಗಳನ್ನಂತೂ ಪ್ರಪಂಚದ ವಿನಾಶದಂಚಿನಲ್ಲಿರುವ ೩೯ ಪಕ್ಷಿಗಳ ಸಾಲಿನಲ್ಲಿ ಸೇರಿಸಿಬಿಟ್ಟಿದೆ. ಜರ್ಮನ್ ಅಧ್ಯನದ ಪ್ರಕಾರ ಹ್ಯಾಂಬರ್ಗ್ನಲ್ಲಿ ಮೂವತ್ತು ವರ್ಷಗಳೀಚೆ ಗುಬ್ಬಿಗಳ ಸಂಖ್ಯೆ  ಅರ್ಧಕ್ಕಿಳಿದಿದೆ. ಹಲವಾರು ಪಕ್ಷಿಶಾಸ್ತ್ರಜ್ಞರು "Common bird goes uncommon" ಎನ್ನುವ ವಿಷಯದಡಿ ಕೆಲಸ ಮಾಡುತ್ತಿದ್ದಾರೆ. ಅಧ್ಯಯನ ಮತ್ತು ಅಧ್ಯಯನಿಗಳು ಎಷ್ಟೇ ಹೆಚ್ಚಿದರೂ ಹತ್ತಾರು ವರ್ಷಗಳೀಚೆ ಇಳಿಯುತ್ತಿರುವ ಗುಬ್ಬಚ್ಚಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ನಶಿಸಲು ನೂರಾರು ಕಾರಣಗಳಿರಬಹುದು ಎಂದು ಊಹಿಸಿದರೂ, ನಿಜವಾದ ಕಾರಣ ಮಾತ್ರ ಇಂದಿಗೂ ರಹಸ್ಯ.
ಅಧ್ಯಯನಗಳ ಪ್ರಕಾರ ಗುಬ್ಬಚ್ಚಿಗಳು ನಶಿಸಿಹೋಗಲು ಮುಖ್ಯ ಕಾರಣಗಳೇನು?
೧. ಅತಿಯಾದ ಕೀಟನಾಶಕಗಳ ಬಳಕೆಯಿಂದ ಗುಬ್ಬಿಗಳ ಆಹಾರ ಪೂರೈಕೆಯ ಕೊರತೆ.
೨. ಅರಣ್ಯನಾಶದಿಂದಾಗಿ ಗೂಡು ಕಟ್ಟುಲು ಸ್ಥಳದ ಕೊರತೆ.
೩. ಅತಿಯಾದ ಸೆಲ್ ಫೋನ್ ಬಳಕೆಯಿಂದುಂಟಾದ ವಿದ್ಯುತ್ಕಾಂತೀಯ ಮಾಲಿನ್ಯ (Electromagnetic Contamination)
೪. ಹೆಚ್ಚಾದ ಗುಬ್ಬಚ್ಚಿ ಪರಭಕ್ಷಕ ಪ್ರಾಣಿಗಳ ಸಂಖ್ಯೆ - ಬೆಕ್ಕು, ಗಿಡುಗ, ಹಾವು ಮುಂತಾದವುಗಳು.
೫. ಮಾನವರ ಮಣ್ಣಿನ ಮನೆಗಳಿಂದ ಸಿಮೆಂಟ್ ಕಟ್ಟಡಗಳ ವಲಸೆ.

ಕಾರಣಗಳೆಷ್ಟೇ ಇರಲಿ, ಅದರಲ್ಲಿ ಮಾನವನ ಆಧುನಿಕತೆಯಿಂದಾಗಿ ನೈಸರ್ಗಿಕ ಅಸಮತೋಲನ ಉಂಟಾಗಿರುವುದೇ ಹೆಚ್ಚು. ಮುನ್ನುಗ್ಗುತ್ತಿರುವ ಮಾನವನರಿಗೆ ಹಿಂದಾಗಿರುವುದು, ಗಳಿಸುತ್ತಿರುವ ಮಾನವರಿಗೆ ಕಳೆದುಕೊಂಡಿದ್ದು ನಿಜವಾಗಿಯೂ ತಿಳಿಯುತ್ತಿಲ್ಲ. ಇದು ಒಂದು ಮನುಷ್ಯ ಯೋಚಿಸಿ, ತೆಗೆದುಕೊಳ್ಳಬೇಕಾದ ನಿರ್ಧಾರವಲ್ಲ. ಇಡೀ ಮಾನವ ಸಂಕುಲವೇ ಹಿಂದಿರುಗಿ ನೋಡಬೇಕಿದೆ. ಇಂದು ಮಾನವನ ಅವಿವೇಕಿ ಬುದ್ದಿಯಿಂದ ಗುಬ್ಬಚ್ಚಿಗಳು ನಶಿಸುತ್ತಿವೆ, ನಾಳೆ ನಾವೇ. ಏಕೆಂದರೆ ಮೇಲೆ ತಿಳಿಸಿದ ಕಾರಣಗಳು ನಮಗೂ ಹಾನಿಕಾರಕವಲ್ಲವೇ? ಕೀಟನಾಶಕಗಳು ನಮಗೂ ಕೂಡ ವಿಷ. ಅರಣ್ಯ ನಾಶದಿಂದ ನಮಗೂ ಒಂದಲ್ಲ ಒಂದು ದಿನ ತೊಂದರೆಯಿದೆ. ಸೆಲ್ ಫೋನ್ ಬಳಕೆ ನಮ್ಮ ಜೀವ ಕೋಶಗಳ ಮೇಲೂ ಅತಿಯಾದ ಹಾನಿಯುಂಟು ಮಾಡುತ್ತವೆ. ಮುಂದುವರಿದ ನಮಗೆ ಹಿಂದಂತೂ ಹೋಗಲಸಾಧ್ಯ. ಸ್ವಲ್ಪ ಮಟ್ಟಿನ ಜಾಗ್ರತೆಯಿಂದ ನಾವು ಉಳಿದು ನಮ್ಮೊಡನಿರುವ ನಿಸರ್ಗವನ್ನೂ ಉಳಿಸಿಕೊಳ್ಳಬಹುದು.

This article was published in TimesKannada news paper http://timeskannada.com/?p=10611


Friday, December 9, 2016

ಸಾವಿರ ಸರೋವರಗಳ ನಾಡು - “ಫಿನ್ಲ್ಯಾಂಡ್” !



ಹೆಸರೇ ಹೇಳುವಂತೆ ಇದು "ಸಾವಿರ ಸರೋವರಗಳ ನಾಡು". ಇಲ್ಲಿ ಪ್ರಕೃತಿ, ಸರೋವರಗಳ ರೂಪದಲ್ಲಿ ಬಿಂಬಿಸಲ್ಪಟ್ಟಿದೆ. ಅದುವೇ "ಫಿನ್ಲ್ಯಾಂಡ್". ಫಿನ್ಲ್ಯಾಂಡ್ ಯೂರೋಪ್ ನಲ್ಲಿರುವ ಒಂದು ದೇಶ. ವಿಸ್ತೀರ್ಣದಲ್ಲಿ ಸುಮಾರು ಮೂರು ಲಕ್ಷ square ಕಿಲೋಮೀಟರು ಇರುವ ಈ ದೇಶ, ಹೆಚ್ಚು-ಕಡಿಮೆ ೫೫ ಲಕ್ಷ ಜನ ಸಂಖ್ಯೆ ಹೊಂದಿದೆ. ಹೆಲ್ಸಿಂಕಿ ಇಲ್ಲಿನ ರಾಜಧಾನಿ. ಫಿನ್ಲ್ಯಾಂಡ್ ೧೯೧೭ ರಲ್ಲಿ ಸ್ವಾತಂತ್ರ ಪಡೆಯಿತು. ಫಿನ್ನಿಷ್ ಮತ್ತು ಸ್ವೀಡಿಷ್ ಇಲ್ಲಿನ ರಾಷ್ತ್ರೀಯ ಭಾಷೆಗಳಾದರೆ, ಸ್ಯಾಮಿ ಪ್ರಾದೇಶಿಕ ಭಾಷೆಯಾಗಿದೆ.

 ಫಿನ್ಲ್ಯಾಂಡನ್ನು ಏಕೆ "ಸಾವಿರ ಸರೋವರಗಳ ನಾಡು" ಎನ್ನುತ್ತಾರೆ? : ವಿಸ್ತೀರ್ಣಕ್ಕೆ ಹೋಲಿಸಿದಾಗ ಸುಮಾರು ಒಂದೂವರೆ ಲಕ್ಷ ಸರೋವರಗಳು ಈ ದೇಶದಲ್ಲಿ ಹೆಚ್ಚಿವೆ. ಪ್ರಪಂಚದ ಇನ್ನುಳಿದ ಯಾವುದೇ ದೇಶದಲ್ಲಿ ಈ ಅನುಪಾತ ನೋಡಲಸಾಧ್ಯ. ಇದರರ್ಥ ಹೆಚ್ಚು-ಕಡಿಮೆ ಇಲ್ಲಿನ ಪ್ರತೀ ಇಪ್ಪತ್ತಾರು ಜನರಿಗೆ ಒಂದು ಸರೋವರವಿದ್ದಂತೆ.  ಸರೋವರಗಳು ಸಾಮಾನ್ಯವಾಗಿ ಉತ್ತರದ Kuopio ಇಂದ ದಕ್ಷಿಣದ Lahtiವರೆಗೆ ಪಶ್ಚಿಮದ Tampere ಇಂದ ಉತ್ತರದ Punkaharju ಮತ್ತು ರಷ್ಯನ್ ಗಡಿವರೆಗೆ ಹರಡಿವೆ.

ಮತ್ತೊಂದು ವಿಸ್ಮಯದ ಸಂಗತಿಯೆಂದರೆ, ಸರೋವರಗಳೆಲ್ಲೆಲ್ಲಿವೆಯೋ ಅಲ್ಲೆಲ್ಲ ಸುಂದರ ಮರಗಳರಿರುವ ಕಾಡುಗಳು. ಫಿನ್ಲ್ಯಾಂಡನ ಕಾಡುಗಳಲ್ಲಿ pine, spruce ಮತ್ತು birch ಮರಗಳಷ್ಟೇ ಕಾಣಸಿಗುತ್ತವೆ. ಬಹುಶಃ ಪ್ರಪಂಚದಲ್ಲಿ ಫಿನ್ಲ್ಯಾಂಡ್ ಒಂದೇ ದೇಶದಲ್ಲಿ ಮಾತ್ರ ಮರಗಳು ಕಾಡಿಗೆ ಮಾತ್ರವಲ್ಲದೆ, ಸರೋವರಗಳಿಗೂ ಸೀಮಿತವಾಗಿರುವುದನ್ನು ಕಾಣಬಹುದು. ಪ್ರಪಂಚದಲ್ಲಿ ಅತೀ ಹೆಚ್ಚು ಮರಗಳಿರುವ ರಾಷ್ಟ್ರಗಳಲ್ಲಿ ಫಿನ್ಲ್ಯಾಂಡ್ ಮುಖ್ಯವಾದದ್ದು (ವಿಸ್ತೀರ್ಣ ಮತ್ತು ಮನುಷ್ಯರ ಅನುಪಾತಕ್ಕನುಗುಣವಾಗಿ). ಫಿನ್ನಿಷ್ ಸೌಂದರ್ಯ ಸರೋವರ, ಮರಗಳಲ್ಲೊಂದೇ ಅಲ್ಲದೆ ಇಲ್ಲಿನ ಮರದ ದಿನ್ನೆಗಳಿಂದ ಮಾಡಿದ ಮನೆಗಳು, ಬೇಸಿಗೆಯ ಕುಟೀರಗಳು, ದೋಣಿಗಳು, ಕರಕುಶಲ ವಸ್ತುಗಳೂ ಎತ್ತಿ ತೋರುತ್ತವೆ.

ಸಾರ್ವಜನಿಕ ಪ್ರವೇಶ ಎಲ್ಲಾ ಸರೋವರ, ಕಾಡು ಮತ್ತು ಹೊರ ಪ್ರದೇಶಗಳಿಗೆ ನೀಡಿರುವದರಿಂದ, ಇದನ್ನು "everyman's rights" ಎಂದು ಕರೆಯುತ್ತಾರೆ.  ಫಿನ್ಲ್ಯಾಂಡ್ ನ ಸೌಂದರ್ಯವನ್ನು ಸವಿಯಲು ಮತ್ತೊಂದು ಆಯ್ಕೆಯೆಂದರೆ Kuopioಗೆ ಭೇಟಿ ಕೊಡುವುದು. ಇಲ್ಲಿನ ೨೪೬ ಅಡಿ ಎತ್ತರದ Puijo ಟವರ್ ಫಿನ್ಲ್ಯಾಂಡ್ ನ್ನು ವಸ್ತು ಸಂಗ್ರಹಾಲಯದ ವಸ್ತುವಿನಂತೆ ಪ್ರತಿಬಿಂಬಿಸುತ್ತದೆ. ಹಸಿರು ಕಾರ್ಪೆಟ್ಟಿನ ಮೇಲೆ ಗಾಜಿನಂತೆ ಸರೋವರಗಳು ಕಾಣುತ್ತವೆ. ಇದೊಂದು ಕಣ್ಣಿಗೆ ಮುದ ನೀಡುವ ಸ್ಥಳ.

ಇನ್ನು ವಿಸ್ತೀರ್ಣದ ಪ್ರಕಾರ ಸೂರ್ ಸೈಮಾ ಸರೋವರ ಅತೀ ದೊಡ್ಡದಾಗಿದೆ. ಇದು ಫಿನ್ಲ್ಯಾಂಡಿನ ಆಗ್ನೇಯ ಭಾಗದಲ್ಲಿದೆ. ಇದರ ವಿಸ್ತೀರ್ಣ ಸುಮಾರು ೪೪೦೦ ಸ್ಕ್ವೇರ್ ಕಿಲೋಮೀಟರ್ಗಳು. ಇದು ಯೂರೋಪಿನ ನಾಲ್ಕನೇ ದೊಡ್ಡ ಸರೋವರ ಕೂಡ. Päijänne ಸರೋವರ ಎರಡನೇ ದೊಡ್ಡ ಸರೋವರವಾಗಿದ್ದು, Inari ಮತ್ತು Pielinen ಸರೋವರಗಳು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ.

ಇನ್ನು ಈ ಪ್ರಕೃತಿ ಸೌಂದರ್ಯಕ್ಕೆ ಮುಖ್ಯ ಕಾರಣ, ಭೂಮಂಡಲದಲ್ಲಿ ಫಿನ್ಲ್ಯಾಂಡ್ ಇರುವ ಸ್ಥಳ. ಇದು ಬೋರಿಯಲ್ ವಲಯಕ್ಕೆ ಸೇರಲ್ಪಡುತ್ತದೆ. ಇಲ್ಲಿನ ಬೇಸಿಗೆ ಸಾಮಾನ್ಯದ್ದಾಗಿರುತ್ತದೆಯಾದರೂ, ಚಳಿಗಾಲ ಮಾತ್ರ ಘನ ಘೋರ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹವಾಮಾನ ವ್ಯತ್ಯಾಸ ಬಹಳಷ್ಟಿದೆ. ಫಿನ್ಲ್ಯಾಂಡ್ ಅಟ್ಲಾಂಟಿಕ್ ಸಮುದ್ರಕ್ಕೆ ಬಹಳ ಹತ್ತಿರವಿದ್ದು ಇಲ್ಲಿನ ಕೊಲ್ಲಿಗಳಿಂದಾಗಿ ಬೆಚ್ಚನೆಯ ಗಾಳಿ ಬೀಸುತ್ತಿರುತ್ತದೆ. ದಕ್ಷಿಣ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ನೂರು ದಿನಗಳ ಕಾಲ ಅತೀ ಚಳಿಗಾಲವಿರುತ್ತದೆ. ಹೆಲ್ಸಿನ್ಕಿಯಲ್ಲಿ ಸಾಮಾನ್ಯವಾಗಿ ನವೆಂಬರ್ ಕೊನೆಯಿಂದ ಮಾರ್ಚ್ ತನಕ ಹಿಮ ಬೀಳುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ -೩೦ ಡಿಗ್ರಿ ಸಿ ತನಕ ಚಳಿ ಇರುತ್ತದೆ. ಉತ್ತರ ಫಿನ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ೨೦೦ ದಿನಗಳ ಕಾಲ ಚಳಿಗಾಲವಿರುತ್ತದೆ. ಇಲ್ಲಿ ಅಕ್ಟೋಬರ್ ಇಂದ ಮೇ ಕೊನೆಯ ತನಕ ಹಿಮ ಬೀಳುತ್ತದೆ.

ಪ್ರಯಾಣಿಕರಿಗೆ ಫಿನ್ಲ್ಯಾಂಡ್ ಒಂದು ಅದ್ಬುತ ಅನುಭವ ಕೊಡುವಂತಹ ದೇಶ. ಪ್ರಕೃತಿ ಸೌಂದರ್ಯದ ತವರೂರು. ಬೇಸಿಗೆ ಅಂತಹ ಹೆಚ್ಚಾಗಿಲ್ಲದೆ ಇರುವುದರಿಂದ ಹಲವಾರು ಕ್ರೀಡೇಗಳಿಗೆ ಕೂಡ ಆಸ್ಪದವಿದೆ. ದೂರದ ದೇಶದ ಪ್ರಯಾಣ ನಿಮ್ಮ ಕನಸಾಗಿದ್ದರೆ, ಫಿನ್ಲ್ಯಾಂಡನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

This article was published in TimesKannada news paper http://timeskannada.com/?p=10070