Wednesday, May 9, 2018

ಬರೀ ಕಲೆಯಲ್ಲವಿದು, ಕರಾವಳಿಯ ಕಲ್ಪತರು.. ಕರ್ನಾಟಕದ ಹೆಮ್ಮೆಯಿದು - "ಯಕ್ಷಗಾನ"


ಬಾಲ್ಯಕ್ಕೂ, ಸವಿ ನೆನಪಿಗೂ ಅವಿನಾಭಾವ ಸಂಭಂಧ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಬಾಲ್ಯ ಮರೆಯಲಾಗದ ಅನುಭವ. ಮಲೆನಾಡಿಗಳಾದ ನನ್ನ ಬಾಲ್ಯ ಕೂಡ ನನಗೊಂದು ಮರೆಯಲಾಗದ ಅನುಭವ. ಹಸಿರುಟ್ಟ ಪ್ರಕೃತಿ, ಮುತ್ತಿನಂಥ ಮಳೆ ಹನಿಗಳೊಂದಿಗಿನ ಬಾಲ್ಯಕ್ಕೆ ಕಲೆಯ ಲೇಪನ. ಹೌದು, ಸಾಗರವೇ (ನನ್ನೂರು) ಹಾಗೆ. ಅದೆಷ್ಟೋ ಕಲಾವಿದರನ್ನು, ನೀನಾಸಂ ಇಂದ ಹೊರತಂದ ತವರೂರು. ಕಲಾವಿದರನ್ನೇ ಹೊರತಂದ ತವರೂರಲ್ಲಿ ಕಲಾ ಪ್ರದರ್ಶನಕ್ಕೆ ಕೊರತೆಯೇ? ನಾಟಕ ಮತ್ತು ಯಕ್ಷಗಾನ ಇಲ್ಲಿನ ಜನರ ದೈನಂದಿನ ಜೀವನ. ನಾಟಕ ಮತ್ತು ಯಕ್ಷಗಾನ ಕಲಾ ಜಗತ್ತಿನ ಬೇರೆ ಬೇರೆ ಪ್ರಾಕಾರಗಳಾದರೂ, ಕಲಾರಸಿಕರನ್ನು ಮತ್ತೊಂದು ಪ್ರಪಂಚಕ್ಕೆ ಕದ್ದೊಯ್ಯುವ ಕಲೆಗಳಿವು. ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿದ್ದಾದರೂ, ಕರ್ನಾಟಕದ ಕಲಾ ಸಂಸ್ಕೃತಿಯನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತಿಹಿಡಿದ ಹೆಮ್ಮೆ.

"ಯಕ್ಷಗಾನ"ಮೊದಲು ಕರ್ನಾಟಕದ ಕರಾವಳಿಯ ಭಾಗದಲ್ಲಿ ಉದಯವಾಯಿತು. ಬೆಳಗಾವಿಯಲ್ಲಿ ದೊರೆತಿರುವ ಪುರಾವೆಯ ಪ್ರಕಾರ "ಯಕ್ಷಗಾನ" ೧೫೫೬ CE ಯಷ್ಟು ಹಳೆಯದ್ದು. ಮದ್ರಾಸ್ ಯೂನಿವೆರ್ಸಿಟಿಯಲ್ಲಿ ಇಂದಿಗೂ ಇದರ ಒಂದು ಪ್ರತಿಯನ್ನು ನಾವು ನೋಡಬಹುದು.  "ಯಕ್ಷಗಾನ"ದ ಮೂಲತಃ ಪದ "ಆಟ". ಇಂದಿಗೂ ಕರಾವಳಿ ಅಥವಾ ಮಲೆನಾಡು ಭಾಗದಲ್ಲಿ ಇದನ್ನು ಆಟವೆಂದೇ ಕರೆಯುತ್ತಾರೆ. ಆಟವೆಂದು ಸ್ಥಳೀಯ ಭಾಗದಲ್ಲಿ ಪ್ರಸಿದ್ಧವಾಗಿದ್ದ "ಯಕ್ಷಗಾನ"ಕ್ಕೆ, "ಯಕ್ಷಗಾನ"ವೆಂಬ ಪದದೊಂದಿಗೆ ಹೊರಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಡಾ।। ಶಿವರಾಮ ಕಾರಂತರದು. ಮೂಲತಃ ಕರಾವಳಿಯವರಾದ ಅವರು, ಸ್ವತಃ ಯಕ್ಷಗಾನ ಕಲಾವಿದರಾಗಿದ್ದರಲ್ಲದೆ, "ಯಕ್ಷಗಾನ"ವೆಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ. "ಯಕ್ಷಗಾನ" ಎಂಬ ಪದದ ಮೂಲ ಅರ್ಥ "ಯಕ್ಷ"ದ ಹಾಡು ಎಂಬುವುದಾಗಿ. "ಯಕ್ಷ"ವೆಂಬುದರ ಮೂಲ ಅರ್ಥವು  ಭೂತ ಅಥವಾ ನಿಸರ್ಗವನ್ನು ಕಾಪಾಡುವ ಶಕ್ತಿ ಎಂಬುದಾಗಿದೆ. ಆದ್ದರಿಂದ ಸಾಮಾನ್ಯವಾಗಿ ಯಕ್ಷಗಾನದ ಕಥೆ ಮತ್ತು ಹಾಡುಗಳು ಪುರಾಣದಿಂದ ಬಂದಿದ್ದಾಗಿದ್ದು, ಒಳ್ಳೆಯ ಮತ್ತು ಕೆಟ್ಟದ್ದರ ನಡುವಿನ ಹೋರಾಟ ಮತ್ತು ಒಳ್ಳೆಯದರ ಜಯ - ಇದರ ಮೇಲೆ ಆಧಾರಿತವಾಗಿರುತ್ತದೆ.

ಯಕ್ಷಗಾನ ಪ್ರಾಕಾರಗಳು:
ಯಕ್ಷಗಾನವು ನೃತ್ಯ-ನಾಟಕಗಳನ್ನೊಳಗೊಂಡ ಪ್ರಾಕಾರವಾಗಿದ್ದು, ಶಾಸ್ತ್ರೀಯ ಮತ್ತು ಜಾನಪದ ಶೈಲಿಯ ನೃತ್ಯವನ್ನು ಅಳವಡಿಸಿಕೊಂಡಿರುತ್ತಾರೆ. ಹಿಂದಿನ ಕಾಲದಲ್ಲಿ ಯಕ್ಷಗಾನ ಪ್ರಸಂಗ ಅಥವಾ ಆಟವನ್ನು ಬಯಲು ರಂಗ ಮಂದಿರಗಳಲ್ಲಿ ನಡೆಸುತ್ತಿದ್ದರು, ಆಧುನಿಕತೆಗೆ ತಕ್ಕಂತೆ ಇಂದಿನ ದಿನಗಳಲ್ಲಿ ರಂಗ ಮಂದಿರದ ವ್ಯವಸ್ಥೆ ಕೂಡ ಉತ್ತಮಗೊಂಡಿದೆ. "ಆಟ"ವನ್ನು ಸಾಮಾನ್ಯವಾಗಿ ರಾತ್ರಿ ಆರಂಭಿಸಿ, ಮುಂಜಾನೆಯವರೆಗೂ ನಡೆಸುತ್ತಾರೆ.  ಹೀಗೆ ನಡೆಸುವ ಯಕ್ಷಗಾನದಲ್ಲಿ ವಿವಿಧ ಬಗೆಯ ವಿಧಾನಗಳಿವೆ.
ಯಕ್ಷಗಾನದ ಎರಡು ಮುಖ್ಯ ವಿಧಾನಗಳು ಈ ಕೆಳಗಿನಂತಿದೆ:
೧. ಪಡುವಲಪಾಯ
೨. ಮೂಡಲಪಾಯ

ಪಡುವಲಪಾಯ:
ಈ ವಿಧವಾದ ಯಕ್ಷಗಾನವು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಕೆಲ ಭಾಗಗಳಲ್ಲಿ ಇನ್ನೂ ಚಾಲನೆಯಲ್ಲಿದೆ. "ಪಡುವಲಪಾಯ"ವನ್ನು ೨ ಉಪ ವಿಭಾಗಗಳಾಗಿ ವಿಂಗಡಿಸಿದ್ದಾರೆ.
೧. ತೆಂಕು ತಿಟ್ಟು (ದಕ್ಷಿಣ ಶೈಲಿ) 
೨. ಬಡಗು ತಿಟ್ಟು (ಉತ್ತರ ಶೈಲಿ)

೧. ತೆಂಕು ತಿಟ್ಟು (ದಕ್ಷಿಣ ಶೈಲಿ):  ಈ ವಿಧವಾದ ಯಕ್ಷಗಾನವು ಕಾಸರಗೋಡು, ಮಂಗಳೂರು, ಸಂಪಾಜೆ, ಪುತ್ತೂರು, ಕಾರ್ಕಳ, ಉಡುಪಿ ಭಾಗಗಳಲ್ಲಿ ಚಾಲತಿಯಲ್ಲಿದೆ. ಈ ಪ್ರಾಕಾರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಭಾವ ಬಹುವಾಗಿರುತ್ತದೆ. ಇದರಲ್ಲಿ ಉಪಯೋಗಿಸುವ ಮದ್ದಳೆಯಲ್ಲಿಯೇ ಇದನ್ನು ಸರಾಗವಾಗಿ ಗುರುತಿಸಬಹುದು. ಥೆಂಕುತಿಟ್ಟಿನ ಸಾಂಪ್ರದಾಯಿಕ ಮೂರು ಬಣ್ಣಗಳೆಂದರೆ - ರಾಜಬಣ್ಣ, ಕಾಟುಬಣ್ಣ ಮತ್ತು ಸ್ತ್ರೀಬಣ್ಣ. ಥೆಂಕುತ್ತಿಟ್ಟಿನ ಮತ್ತೊಂದು ವಿಶೇಷವೆಂದರೆ ಜೋರಾದ ಭಾಗವತಿಕೆ, ಜೋರಾದ ಚಂಡೆ, ಮದ್ದಳೆ ಮತ್ತು ಜಾಗಟೆಗಳ ಬಳಕೆಯನ್ನು ಇಲ್ಲಿ ಮಾಡುತ್ತಾರೆ. ಇನ್ನು ಕುಣಿತಕ್ಕೆ ಬಂದರೆ ತೆಂಕು ತಿಟ್ಟು ಬಾಹುವಾದ "ಧಿಗಿಣ"ವನ್ನು ಬಳಸುತ್ತದೆ. ಇದರಲ್ಲಿ ಜಿಗಿತ ಮತ್ತು ತಿರುಗುತ್ತ ಜಿಗಿಯುವ ಕುಣಿತ ಹೆಚ್ಚಿರುತ್ತದೆ. ತೆಂಕುತಿಟ್ಟು ನೃತ್ಯಕ್ಕೆ ಕೂಡ ಬಹು ಆದ್ಯತೆ ಕೊಡುತ್ತದೆ. ಥೆಂಕುತಿತ್ತು ಅತಿ ವೇಗವಾದ ನೃತ್ಯ ಶ್ಯಲಿಯನ್ನು ಹೊಂದಿರುವದರಿಂದ, ಇಂದಿಗೂ ಅತಿ ಪ್ರಸಿದ್ದವಾದ ಯಕ್ಷಗಾನ ಶೈಲಿ ಇದಾಗಿದೆ.
ಧರ್ಮಸ್ಥಳ ಮತ್ತು ಕಟೀಲು ದುರ್ಗಾಪರಮೇಶ್ವರಿ ಮೇಳಗಳು ತೆಂಕುತಿಟ್ಟನ್ನು ಪ್ರಸಿದ್ದಿಗೆ ತಂದವು. ಸಾಮಾನ್ಯವಾಗಿ ಥೆಂಕುತಿಟ್ಟು ಕರಾವಳಿಯೊಂದೇ ಅಲ್ಲದೆ, ಹೊರ ಭಾಗದಲ್ಲಿ ಪ್ರಖ್ಯಾತಿ ಪಡೆದಿದೆ.

೨. ಬಡಗು ತಿಟ್ಟು (ಉತ್ತರ ಶೈಲಿ): ಈ ವಿಧವಾದ ಯಕ್ಷಗಾನವು ಉತ್ತರ ಉಡುಪಿ, ಕುಂದಾಪುರ, ಬೈಂದೂರ್, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಚಾಲತಿಯಲ್ಲಿದೆ. ಬಡಗು ತಿಟ್ಟಿನಲ್ಲಿ ಮಾತುಗಾರಿಕೆ ಮತ್ತು ಮುಖ ಭಾವಕ್ಕೆ ಹೆಚ್ಚಿನ ಆದ್ಯತೆ.  ನೃತ್ಯ ಸಾಮಾನ್ಯವಾಗಿ ಪಾತ್ರಕ್ಕೆ ತಕ್ಕಂತಿರುತ್ತದೆ. ಇದರಲ್ಲಿ ಕರ್ನಾಟಕದ ಸಾಂಪ್ರದಾಯಿಕ ಚಂಡೆಯನ್ನು ಉಪಯೋಗಿಸಲಾಗುತ್ತದೆ. ಶಿವರಾಮ ಕಾರಂತರ "ಯಕ್ಷಗಾನ ಮಂದಿರ"ವು (ಸಾಲಿಗ್ರಾಮ) ಬಡಗು ತಿಟ್ಟಿನ ಯಕ್ಷಗಾನದ್ದಾಗಿದೆ. ಇನ್ನು ಶಿವರಾಮ ಹೆಗಡೆಯವರು ಹುಟ್ಟು ಹಾಕಿದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೂಡ ಬಡಗು ತಿಟ್ಟು ಶೈಲಿಯದ್ದಾಗಿದೆ.


ಮೂಡಲಪಾಯ:
ಈ ವಿಧವಾದ ಯಕ್ಷಗಾನವು ಕರ್ನಾಟಕ ಪೂರ್ವದ ಕೆಲ ಜಿಲ್ಲೆಗಳಾದ ಚನ್ನರಾಯ ಪಟ್ಟಣ, ಅರಸೀಕೆರೆ, ನಾಗಮಂಗಲ, ತುರುವೇಕೆರೆ, ಹಿರಿಯೂರು, ಚಳ್ಳಕೆರೆ, ಮತ್ತು ಉತ್ತರದ ಕೆಲ ಭಾಗಗಳಲ್ಲಿ ಚಾಲತಿಯಲ್ಲಿದೆ. ಈ ವಿಧಾನದಲ್ಲಿ ಕೂಡ ೨ ಉಪ ವಿಭಾಗಗಳಿವೆ:
೧. ದೊಡ್ಡಾಟ
೨. ಸಣ್ಣಾಟ


ಹಿಮ್ಮೇಳ ಮತ್ತು ಮುಮ್ಮೇಳ:
ಇನ್ನು ಪ್ರದರ್ಶಕರ ಬಗ್ಗೆ ಹೇಳುವುದಾದರೆ, "ಮುಮ್ಮೇಳ" ಮತ್ತು "ಹಿಮ್ಮೇಳ"ಗಳಾಗಿ ಪ್ರದರ್ಶಕರನ್ನು ವಿಂಗಡಿಸುತ್ತಾರೆ. ಹಿಮ್ಮೇಳವನ್ನು "ಹಿಮ್ಮೇಳ" ಅಥವಾ ಭಾಗವತರೆಂದು ಕರೆಯುತ್ತಾರೆ. ಕಥೆ ಅಥವಾ ಹಾಡಿನ ಭಾಗವನ್ನು ಹಿಮ್ಮೇಳದವರು ನಡೆಸಿ ಕೊಡುತ್ತಾರೆ. ಸಾಮಾನ್ಯವಾಗಿ ಚಂಡೆ ಮತ್ತು ಮೃದಂಗದೊಂದಿಗೆ ಯಕ್ಷಗಾನ ಪದವನ್ನು ಹಾಡುತ್ತಾರೆ. ಇನ್ನು ಹಾಡಿಗೆ ತಕ್ಕಂತೆ ಕುಣಿದು ಕಥೆಗೆ ನಿಜ ರೂಪ ಕೊಡುವವರು ಯಕ್ಷಗಾನ ಕಲಾವಿದರು. ಇವರನ್ನು "ಮುಮ್ಮೇಳ"ವೆಂದು ಕರೆಯುತ್ತಾರೆ.

೧. ಹಿಮ್ಮೇಳ: ಹಿಮ್ಮೇಳ ಅಥವಾ ಭಾಗವತಿಕೆಯವರ ಕೆಲಸ ಮುಮ್ಮೇಳದವರಷ್ಟೇ ಮಹತ್ವದ್ದಾಗಿದೆ. ರಂಗ ಪ್ರವೇಶ ಮಾಡುವ ಮೊದಲಿಗರೂ "ಹಿಮ್ಮೇಳ"ದವರೆ. ಹೀಗೆ ರಂಗ ಪ್ರವೇಶ ಮಾಡಿದ ನಂತರ  ಕಥೆಯನ್ನು ನೈಜ ರೀತಿಯಲ್ಲಿ ತೆಗೆದುಕೊಂಡು ಹೋಗಿ ಪ್ರದರ್ಶಕರನ್ನು ನಿರ್ದೇಶಿಸುವವರೂ ಇವರೇ. ಏರು ಧ್ವನಿಯಲ್ಲಿ ಪದ ಹಾಡುವದೊರೊಂದಿಗೆ, ಕಥೆಯನ್ನು ಕೂಡ ಚಾಚೂ ತಪ್ಪದೆ ಹೇಳುವ ಇವರ ಪಾತ್ರ ಯಕ್ಷಗಾನದಲ್ಲಿ ಮಹತ್ತರವಾದುದು.

೨. ಮುಮ್ಮೇಳ: ಯಕ್ಷಗಾನದ ಅತ್ಯಾಕರ್ಷಕ ಗುಣ ಲಕ್ಷಣವೆಂದರೆ, ಕಲಾವಿದರು ತೊಡುವ  ಬಣ್ಣ ಬಣ್ಣದ ಉಡುಗೆಗಳು. ನೋಡಲು ಮನಮೋಹಕವಿರುವ ಉಡುಗೆಗಳನ್ನು ಧರಿಸಲು ಕಲಾವಿದ ತೆಗೆದುಕೊಳ್ಳುವ ಸಮಯ, ಅದರ ಹಿಂದಿನ ಶ್ರಮ ಮತ್ತು ಭಾರೀ ತೂಕದ ವೇಷದೊಂದಿಗೆ ಕುಣಿಯುವ ಕಲಾವಿದನ ತಾಳ್ಮೆಗೆ ಎಂಥಹ ಪ್ರೇಕ್ಷಕ ಕೂಡ ಮೆಚ್ಚುವಂಥದ್ದೇ. ಇನ್ನು ಮೋರೆಯ (ಮುಖದ) ಅಲಂಕಾರಕ್ಕೆ ತೆಗೆದುಕೊಳ್ಳುವ ಸಮಯವನ್ನು ಮರೆಯಲಸಾಧ್ಯವೇ?  ಇಷ್ಟಲ್ಲದೆ ನಿಮಗೊಂದು ತಿಳಿದಿರದ ಸತ್ಯವೇನೆಂದರೆ, ಹೊಟ್ಟೆ ತುಂಬಿದ್ದರೆ ಕಲಾವಿದನಿಗೆ ಕುಣಿಯಲಸಾಧ್ಯ. ಆದ್ದರಿಂದ ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ಹಸಿದುಕೊಂಡೇ ಪ್ರಸಂಗ ನೆಡೆಸಿಕೊಡುತ್ತಾರೆ. ಒಬ್ಬ ಕಲಾವಿದನ ಮಹತ್ತರ ಕಲಾಸೇವೆಗೆ, ಇದಕ್ಕಿಂತ ಬೇರೆ ಉದಾಹರಣೆ ಬೇಕೇ?

ಕಲಾವಿದರು:
ಯಕ್ಷಗಾನದಲ್ಲಿ ಕಲೆಯ ಎಲ್ಲಾ ವಿಧವನ್ನು ನೋಡಬಹುದು. ಯಕ್ಷಗಾನದಲ್ಲಿ ಸಂಗೀತವಿದೆ, ನೃತ್ಯವಿದೆ, ಪುರಾಣ-ಇತಿಹಾಸದ ಕಥೆಗಳಿವೆ, ಅಭಿನಯವಿದೆ, ನಿರ್ದೇಶನವಿದೆ - ಇದರಿಂದಲೇ ಯಕ್ಷಗಾನ ವೈಶಿಷ್ಟ್ಯವಾಗಿ ಕಾಣಲ್ಪಡುತ್ತದೆ. ಇಂತಹ ವೈಶಿಷ್ಟ್ಯವನ್ನು ಜೀವನವಾಗಿಸಿಕೊಂಡು ಬದುಕಿ ಹೋದ ಮತ್ತು ಬದುಕುತ್ತಿರುವ ಅನೇಕ ಕಲಾವಿದರು ನಮ್ಮೊಂದಿಗಿದ್ದಾರೆ. ಅನೇಕರು ರಾಷ್ಟ್ರ ಮಟ್ಟದ ಪ್ರಶಸ್ತಿ ಗೆದ್ದು, ಕನ್ನಡ ತಾಯಿಯ ಋಣ ತೀರಿಸಿದ್ದಾರೆ. ಅಂತಹ ಕಲಾವಿದರ ಹೆಸರನ್ನು ಉಲ್ಲೇಖಿಸುವಲ್ಲಿ, ನನ್ನದೊಂದು ಸಣ್ಣ ಪ್ರಯತ್ನ.


ಭಾರತದ ಅತೀ ಶ್ರೇಷ್ಠ ಪ್ರಶಸ್ತಿಯಾದ "ಪದ್ಮಶ್ರೀ"ಯನ್ನು ಯಕ್ಷಗಾನದ ಮುಡಿಗೇರಿಸಿದ ಕೀರ್ತಿ "ಚಿಟ್ಟಾಣಿ ರಾಮಚಂಡ್ರ ಹೆಗಡೆ"ಯವರದ್ದು. ಇನ್ನು ಯಕ್ಷಗಾನಕ್ಕೆ ರಾಷ್ಟ್ರಪತಿ ಪ್ರಶಸ್ತಿ ತಂದುಕೊಟ್ಟ ಕೀರ್ತಿ "ಕೆರೆಮನೆ ಶಿವರಾಮ ಹೆಗಡೆ"ಯವರದ್ದು. 
ಇವರಲ್ಲದೆ ಹೆಸರಿಸಲೇಬೇಕಾದ ಕಲಾವಿದರೆಂದರೆ:
ಹಿಮ್ಮೇಳ: ಬಲಿಪ ರಾಘವೇಂದ್ರ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ಪುತ್ತಿಗೆ ರಾಮಕೃಷ್ಣ ಜೋಯಿಸ್, ದಾಮೋದರ ಮಂಡೆಚ್ಚ, ನಲ್ಲೂರು ಮರಿಯಪ್ಪ ಆಚಾರ್, ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಕಡತೋಕ ಮಂಜುನಾಥ ಭಾಗವತ, ಪದ್ಯಾಣ ಗಣಪತಿ ಭಟ್, ಕಡತೋಕ ಕೃಷ್ಣ ಭಾಗವತ, ನಿಬ್ಬುರು ನಾರಾಯಣ ಹೆಗಡೆ, ಮುಂತಾದವರು.
ಮುಮ್ಮೇಳ: ವಂದಾರು ಬಸವ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಬು ಹೆಗಡೆ, ಶಂಕರನಾರಾಯಣ ಸಾಮಗ, ಜಯರಾಮ ಶೆಟ್ಟಿ ಹಾಲಾಡಿ, ಕೆರೆಮನೆ ಶಿವಾನಂದ ಹೆಗಡೆ, ಕೊಡದಕುಳಿ ರಾಮಚಂದ್ರ ಹೆಗಡೆ, ವೀರಭದ್ರ ನಾಯಕ, ಗೋವಿಂದ ನಾಯಕ್ ಕೊನಳ್ಳಿ, ಗೋಡೆ ನಾರಾಯಣ ಹೆಗಡೆ, ಮಂಟಪ ಪ್ರಭಾಕರ್ ಉಪಾಧ್ಯ, ಅನಂತ ಹೆಗ್ಡೆ ಕೊಳಗಿ, ಕುರಿಯ ವಿಠ್ಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್ ಇನ್ನೂ ಮುಂತಾದವರು.

"ಯಕ್ಷಗಾನ"ವನ್ನು ಕರ್ನಾಟಕವಷ್ಟೇ ಅಲ್ಲದೆ, "ಯಕ್ಷಗಾನಮು” ಎಂಬ ಹೆಸರಿನಲ್ಲಿ ಆಂಧ್ರ ಪ್ರದೇಶದಲ್ಲೂ ಕೂಡ ಕಾಣಬಹುದು. "ಯಕ್ಷಗಾನ" ಕನ್ನಡಿಗರಾದ ನಮ್ಮ ನಿಮ್ಮೆಲ್ಲರ ಹೆಮ್ಮೆ. ಅದು ನಮ್ಮ- ನಿಮ್ಮೆಲ್ಲರ ತವರೂರಿನ ಕಲೆ. ಅನೇಕ ಭಾರಿ ಸರ್ಕಾರ ಅಥವಾ ಯಾವುದೇ ಸಂಘ ಸಂಸ್ಥೆಯಿಂದ ಸಹಾಯ ಸಿಗದೇ ಇದ್ದರೂ ಯಕ್ಷಗಾನ ಕಲಾವಿದರು ಹಿಂದೇಟಾಕದೆ, ಯಕ್ಷಗಾನವನ್ನು ಅಭಿನಯಿಸಿ, ಶಿಭಿರಗಳನ್ನು ನೆಡೆಸಿ ಯುವ ಪೀಳಿಗೆ ನಡೆಸಿಕೊಂಡು ಹೋಗುವಂತೆ ಮಾಡಿದ್ದಾರೆ. ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಹಿಸುವುದು ನಾವು ಇಂತಹ ಕಲಾವಿದರಿಗೆ ಕೊಡುವ ಶ್ರೇಷ್ಠ ಗೌರವ. ಯಕ್ಷಗಾನ ಉಳಿಸಿ, ಬೆಳಸಿ.

Wednesday, April 11, 2018

Canvas Painting : Nature


Wednesday, February 28, 2018

....ಮಲೆನಾಡಿನ ಮಳೆ....


ಬಹುಷಃ ಪ್ರತಿಯಾಬ್ಬರಿಗೂ "ಮಲೆನಾಡು" ಎಂದರೆ ಮಳೆಯನ್ನು ಹೊರತು ಬೇರಾವ ನೆನಪು ಬರಲು ಸಾದ್ಯವಿಲ್ಲ. ಹೆಸರೇ ಹೇಳುವಂತೆ ಇದು ಮಳೆಯ ನಾಡು - ಮಲೆನಾಡು. ಮಲೆನಾಡ ಮಡಿಲಲ್ಲಿ ಬೆಳೆದ ನನಗೆ ಮತ್ತು ಮಳೆಗೆ ಅವಿನಾಭಾವ ಸಂಭಂದ. ನನ್ನ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕಿದಾಗ ಮಳೆಯದ್ದೇ ಮುಖ್ಯ ಪಾತ್ರ.



ಅದೆಷ್ಟೋ ದಿನ ಮಳೆಯಲ್ಲಿ ಆಡಿ ಕುಣಿದಿದ್ದಿದೆ, ಅದೆಷ್ಟೋ ಭಾರಿ ಮಲೆನಾಡ ಇಳಿ ಜಾರಿನ ಪ್ರದೇಶಗಳಲ್ಲಿ ಜಾರಿ ಬಿದ್ದಿದ್ದಿದೆ, ಮಳೆಯಲ್ಲಿ ಆಡಿದ ನೀರಾಟ ಮರೆಯಲಸಾಧ್ಯ. ಸಾಮಾನ್ಯವಾಗಿ ಎಲ್ಲ ಮಕ್ಕಳಿಗೆ ದಸರಾ ಮತ್ತು ಬೇಸಿಗೆ ರಜಾದಿನಗಳ ಅನುಭವವಾಗುತ್ತಿದ್ದರೆ, ಮಲೆನಾಡಿನವರಾದ ನಮಗೆ ಮಳೆಗಾಲದ ರಜೆ ಸಿಗುತ್ತಿತ್ತು.  ಇನ್ನು ಮೇ ತಿಂಗಳು ಬಂತೆಂದರೆ ಹಿಂಗಾರಿನ ಆರ್ಭಟ ಭಯ ತರಿಸುತ್ತಿತ್ತು. ಅದೊಂಥರಾ ಅಮೆರಿಕಾದ ದಕ್ಷಿಣ ಭಾಗದ  Tornodo ಅನುಭವ - ಕಾರ್ಮೋಡದ ನಡುವಿನ ಜೀವನ. ಇನ್ನು ಜೂನ್ ಬಂತೆಂದರೆ ನಮ್ಮ ಮುಂದಿನ ಮೂರೂ ತಿಂಗಳು ಹನಿಗಳೊಂದಿಗಿನ ಚೆಲ್ಲಾಟ. ಹಚ್ಚ ಹಸಿರುಟ್ಟ ಪ್ರಕೃತಿಯನ್ನು ನೋಡುವುದೇ ಕಣ್ಣಿಗೆ ಹಬ್ಬ, ಅದರಲ್ಲೂ ಅದರೊಂದಿಗಿನ ಜೀವನ ಮರೆಯಲಾಗದ ಅನುಭವ.


ಚಿಟ-ಪಟ ಸದ್ದಿನಿಂದ ಆರಂಭವಾಗಿ ಧೋ ಎಂಬ ತಾರಕಕ್ಕೇರಿ ಮತ್ತೆ ಚಿಟ-ಪಟದೊಂದಿಗೆ ಮುಕ್ತಾಯ. ಅದೊಂದು ಹೇಳಲಾರದ, ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಸುಂದರ ಪ್ರತಿಕ್ರಿಯೆ. ಮಳೆಯೇ ಹಾಗೆ ಎಂಥಹ ಕಲ್ಲು ಮನಸ್ಸಿನವರನ್ನು ಮೃದುವಾಗಿಸಿ ಬಿಡುತ್ತದೆ, ತನ್ನೊಳಗೆ ಅವರೂ ಹರ್ಷ ಪಡುವಂತೆ ಮಾಡುತ್ತದೆ. ಮನಸ್ಸು ಸೃಷ್ಟಿಯೋಡಲಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಮೊದ-ಮೊದಲ ತುಂತುರು ಮಳೆಯೊಂದಿಗೆ ಬರುವ ಆ ಮಣ್ಣಿನ ಪರಿಮಳಕ್ಕೆ ಆಧುನಿಕ ಜಗತ್ತಿನ ಯಾವೊಂದು ಪರಿಮಳ ದ್ರವ್ಯವು ಪೈಪೋಟಿ ನೀಡಲಾಗದು.


ಮಳೆ ಸುಂದರ ಪ್ರಕೃತಿಯ ವಿಶೇಷ ಪ್ರತಿಕ್ರಿಯೆಯಾದರೆ, ಮಳೆಗೆ ಮಲೆನಾಡಿನ ಜನರ ಪ್ರತಿಕ್ರಿಯೆಯೇ ಬೇರೆ. ಮಳೆಯಲ್ಲಿ ನೆನೆದು ಬಂದು ನಂತರ ಹಂಡೆಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವುದು. ಅದಾದ ಮೇಲೆ ಬೇಯಿಸಿದ ಹಲಸಿನ ಬೀಜ, ಹಲಸಿನ ಹಪ್ಪಳದೊಂದಿಗೆ ಕೈಗೂ ಬಾಯಿಗೂ ಕಚ್ಚಾಟ. ಬಿಸಿ ಬಿಸಿ ಆರೋಗ್ಯಕರ ಕಷಾಯವಂತೂ ಸದಾ ಸಿದ್ದ. ಇನ್ನು ಬಿಸಿ ಮಜ್ಜಿಗೆ ಹುಳಿ, ಪತ್ರೊಡೆ, ಹಲಸಿನ ಚಿಪ್ಸ್ ಇವೆಲ್ಲದರ ಮಳೆಗಾಲದ ಗೆಳೆತನ ಅವಿನಾಭಾವ. ಇದೆಲ್ಲದರೊಂದಿಗೆ, ಹೊತ್ತಿಲ್ಲದ ಹೊತ್ತಿನಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗುವುದು - ಪ್ರಪಂಚದಲ್ಲಿ ಇದರಷ್ಟು ಸುಖ ಇನ್ನೊಂದಿಲ್ಲ.



ಇನ್ನು, ಮಳೆನಿಂತ ಮೇಲೆ ಹೇಳುವುದೇ ಬೇಡ, ಅದೊಂದು ವಿಭಿನ್ನ ಅನುಭವ. ಸುಂದರ ಹಸಿರು ಸೀರೆಯುಟ್ಟ ಯುವತಿಯಾಗಿರುತ್ತಾಳೆ "ನಿಸರ್ಗೆ". ಪ್ರತಿಯೊಂದು ಎಲೆಯ ಮೇಲೂ ಹನಿ ಹನಿಯಾಗಿ ಗುರುತು ಮೂಡಿಸಿಟ್ಟಿರುತ್ತಾಳೆ "ವರ್ಷಧಾರೆ". ಜೇಡನ ಬಲೆಯಲ್ಲಿ ಸಿಕ್ಕಿಕೊಂಡಿರುವ ಹನಿಗಳು ಪೋಣಿಸಿದ ಮುತ್ತಿನ ಮಣಿಗಳಂತೆ ಕಂಗೊಳಿಸುತ್ತವೆ. ಅದೆಷ್ಟೋ ಜಾತಿಯ ವಿಧ ವಿಧದ ಪುಷ್ಪ ರಾಶಿ ಜೀವ ಕಂಡುಕೊಳ್ಳುತ್ತದೆ. ಅಣಬೆಗಳಂತೂ ಬೇರೆಯ ಪ್ರಪಂಚವನ್ನೇ ಸೃಷ್ಟಿಸಿರುತ್ತವೆ.



ಆಧುನಿಕತೆ ಬೆಳೆದಂತೆ ಮನುಷ್ಯ ಮುಗ್ಧ ಪ್ರಪಂಚದಿಂದ ಪಟ್ಟಣದೆಡೆಗೆ ತನ್ನ ವಾಸ್ತವ್ಯ ಬದಲಿಸುತ್ತಿದ್ದಾನೆ. ದುರಾದೃಷ್ಟವಷತ್, ನಾವು-ನೀವು ಪ್ರತಿಯಾಬ್ಬರೂ ಆ ಮಲೆನಾಡ ವರ್ಷಧಾರೆಯ ಹರ್ಶೋದ್ಗಾರವನ್ನು ಕೇವಲ ದೂರದರ್ಶನದಲ್ಲಿ ವೀಕ್ಷಿಸುವಂತಾಗಿದೆ. ಐದು ನಿಮಿಷ ಸುರಿವ ತುಂತುರು ಮಳೆಯೊಂದಿಗೆ ನಮ್ಮ ಮನಸ್ಸು ರಾಜಿಯಾಗುವಂತಾಗಿದೆ. ಆದರೂ ಮಳೆ ಬರುವಾಗ ಮನಸ್ಸು ಮಲೆನಾಡ ಮಳೆಯನ್ನೇ ಯೋಚಿಸುತ್ತಿರುತ್ತದೆ,
"ಗಗನದಲಿ ಮಳೆಯದಿನ
ಗುಡುಗಿನ ತನನ
ಆ ತನನ ದಿನ ಧರಣಿಯಲಿ, ಹಸಿರಿನ ಜನನ...
ಮಲೆನಾಡಿನ ......
ಮಳೆ ಹಾಡಿನ .........
ಪಿಸುಮಾತಿನ..
ಹೊಸತನಾ... .
ಸವಿದೆನಾ ...... " ಎಂಬಂತೆ.

Wednesday, March 15, 2017

ಸುಗ್ಗಿ ಸಂಭ್ರಮದ ಸುಂದರ ಹಬ್ಬ - ಸಂಕ್ರಾಂತಿ


ಸಂಕ್ರಾಂತಿ ಅಥವಾ ಸುಗ್ಗಿಯ ಹಬ್ಬ ಭಾರತದ ಬಹು ಭಾಗಗಳಲ್ಲಿ ಆಚರಿಸುವ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲ್ಪಡುವ ಈ ಹಬ್ಬವನ್ನು, ಸಂಕ್ರಾಂತಿ ಎಂದು ಕರ್ನಾಟಕ, ಆಂಧ್ರ, ತೆಲಂಗಾಣ, ಬಿಹಾರ್, ಝಾರ್ಖಂಡ್ ಮುಂತಾದ ಹಲವಾರು ರಾಜ್ಯಗಳಲ್ಲಿ ಕರೆಯುತ್ತಾರೆ. ಸಂಕ್ರಾತಿ ಪದದ ನಿಜವಾದ ಅರ್ಥ "ಚಲನ". ಜೀವವಿರುವ ಪ್ರತಿಯೊಂದು ವಸ್ತುವೂ ಚಲಿಸಲೇಬೇಕು. ನಮ್ಮ ಹಿರಿಯರು ನಮಗಿಂತ ಮೊದಲು ಚಲಿಸಿದರೆ, ನಮಗಿಂತ ಕಿರಿಯರು ನಮ್ಮ ಚಲನಕ್ಕೆ ಕಾಯುತ್ತಾರೆ. ಭೂ ಮಂಡಲ ಚಲಿಸುವಾಗ ಅದಕ್ಕನುಸಾರವಾಗಿ ಜೀವಿಗಳನ್ನು ತರಬೇತಿ ನೀಡುತ್ತದೆ. ಚಲನೆ ಒಂದು ಹಂತದವರೆಗೆ ಸುಖಕರವಾಗಿರುತ್ತದೆ. ನಿಧಾನವಾಗಿ ಋತುಗಳನ್ನು ಬದಲಿಸುತ್ತಾ ಚಲಿಸುವ ಭೂಮಿ, ಒಂದೇ ಭಾರಿಗೆ ರಭಸವಾಗಿ ಚಲಿಸಲಾರಂಭಿಸಿದರೆ ನಮ್ಮ ಗತಿ ದೇವರೇ ಬಲ್ಲ. ಆದ್ದರಿಂದ ಯಾವುದೇ ಚಲನೆಗೆ ಪರಿಮಿತಿಯ ಅವಶ್ಯಕತೆ ತುಂಬಾ ಇದೆ.

ಮಕರ ಸಂಕ್ರಾತಿಯ ವೈಶಿಷ್ಟ್ಯ:
ರಾಶಿಚಕ್ರದ ಮಹತ್ತರ ಬದಲಾವಣೆಯೇ ಮಕರ ಸಂಕ್ರಾಂತಿಯ ಮಹತ್ವ. ಈ ರಾಶಿಚಕ್ರದಲ್ಲಾಗುವ ಮಹತ್ತರ ಬದಲಾವಣೆಯನ್ನು ಭೂ ಮಂಡಲದಲ್ಲಿರುವ ನಾವು ನೀವೆಲ್ಲರೂ ಖಂಡಿತ ಅನುಭವಿಸಿದ್ದೇವೆ. ಇಂತಹ ಹಲವಾರು ಸಂಕ್ರಾಂತಿಗಳು ವರ್ಷವಿಡೀ ಬಂದರೂ, ಮಕರ ಸಂಕ್ರಾಂತಿ ಮತ್ತು ಅದರ ವಿರುದ್ಧ ಏರ್ಪಡುವ ಕರ್ಕ ಸಂಕ್ರಾಂತಿಗಳಲ್ಲಿ ರಾಶಿ ಚಕ್ರದ ಬದಲಾವಣೆಗಳು ಮಹತ್ತರ. ಮಕರ ಸಂಕ್ರಾಂತಿಯಂದು ಸೂರ್ಯ ಭೂಮಿಯ ಉತ್ತರಭಾಗದೆಡೆ ಬರುವುದರಿಂದ ಇದನ್ನು ಉತ್ತರಾಯಣವೆನ್ನುತ್ತಾರೆ (ಉತ್ತರ + ಅಯನ ). ಕರ್ಕ ಸಂಕ್ರಾಂತಿಯ ನಂತರ ಸೂರ್ಯ ಭೂಮಿಯ ದಕ್ಷಿಣದೆಡೆ ಕಂಡು ಬರುವುದರಿಂದ ಇದನ್ನು ದಕ್ಷಿಣಾಯಣವೆಂದೂ ಕರೆಯುತ್ತಾರೆ. ಭಾರತೀಯರಿಗೆ ಮಕರ ಸಂಕ್ರಾಂತಿಯ ನಂತರ ಸೂರ್ಯ ಸನಿಹವಾಗುವುದರಿಂದ ಬೆಳಕಿನ ಪ್ರಭಾವಳಿ ಜಾಸ್ತಿ.

ರವೇಃ ಸಂಕ್ರಮಣಂ ರಾಶೌ  ಸಂಕ್ರಾಂತಿರಿತಿ ಕಥ್ಯತೇ।
ಸ್ನಾನದಾನತಪಃಶ್ರಾದ್ಧಹೋಮಾದಿಷು ಮಹಾಫಲಾ।।
ಮೇಷಾದಿಷು ದ್ವಾದಶರಾಶಿಷು ಕ್ರಮೇಣ ಸಂಸಾರತಃ ಸೂರ್ಯಸ್ಯ 
ಪೂರ್ವಸ್ಮಾದ್ರಾಶೇಃ ಉತ್ತರರಾಶೌ ಸಂಕ್ರಮಣಂ ಪ್ರವೇಶಃ ಸಂಕ್ರಾಂತಿಃ ।

ಒಂದು ರಾಶಿಯಿಂದ ಮುಂದಿನ ರಾಶಿಗೆ ರವಿಯ ಪ್ರವೇಶವನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಆ ಮುಹೂರ್ತದಲ್ಲಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿ ಆಚರಣೆಗಳನ್ನು ಮಾಡಿದರೆ ಮಹಾಫಲ ಪ್ರಾಪ್ತವಾಗುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಪ್ರವೇಶ ಮಾಡುವುದಲ್ಲದೇ ಗ್ರಹಗಳು, ನಕ್ಷತ್ರ ಮತ್ತು ರಾಶಿಗಳಲ್ಲಿ ಪ್ರವೇಶ ಮಾಡುವುದು ಕೂಡ ಸಂಕ್ರಾಂತಿ ಪುಣ್ಯಕಾಲದಲ್ಲಿಯೇ. ಆದರೂ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದನ್ನೇ ವಿಶೇಷವಾಗಿ ಸಂಕ್ರಾಂತಿಯೆಂದು ಕರೆಯುವುದು ರೂಢಿಯಾಗಿದೆ

ಕಾಲವೊಂದಿತ್ತು ಮಾನವ ಭೂಮಿಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಹಾಗೆ ತಿನ್ನಲಷ್ಟೆ ಕಲಿತಿದ್ದ. ಕಾಲ ಮುಂದುವರಿದಂತೆ ತನ್ನ ಆಹಾರವನ್ನು ತಾನೇ ತಯಾರಿಸಲು ಕಲಿತ. ತಯಾರಿಸುವ ಕಲಿಕಾ ವಿಧಾನದಲ್ಲಿ, ಕೃಷಿ ಮಾಡುವುದನ್ನೂ ಕಲಿತ. ಮಾನವನಿಗೆ ಹುಡುಕಿ ತಿನ್ನುವಾಗ ಇರುವುದಷ್ಟೇ ಉಪಯೋಗಿಸಲು ಗೊತ್ತಿತ್ತು. ಕೃಷಿಯೊಂದಿಗೆ ತನಗೆ ಬೇಕಾದ್ದನ್ನು ತಯಾರಿಸಿಕೊಳ್ಳುವ ವಿಧಾನವನ್ನು ಕಲಿತುಕೊಂಡ. ನಾವು ಮಗುವಾದಾಗ ತಾಯಿ ಕೊಟ್ಟಿದ್ದನ್ನಷ್ಟೇ ತಿನ್ನಲು ಗೊತ್ತಿರುತ್ತದೆ, ಬೆಳೆಯುತ್ತಾ ಹೋದಂತೆ ನಾವು ಸ್ವಾವಲಂಬಿಗಳಾಗುತ್ತೇವೆ - ಇದೊಂದು ಮಾನವ ಕುಲದ ಬದಲಾವಣೆಗೆ ಸಂಕ್ಷಿಪ್ತ ಪರ್ಯಾಯಾವಲೋಕನ. ಸ್ವಾವಲಂಬಿಗಳಾದಂತೆ ಹೇಗೆ ತಾಯಿಯ ಮಡಿಲಿಂದ ದೂರ ಸರಿಯುತ್ತೇವೆಯೋ ಹಾಗೆಯೇ ಆಧುನಿಕತೆ ಬೆಳೆದಂತೆ ಮಾನವ ನಿಸರ್ಗದ ಮಡಿಲಿಂದ ಖಂಡಿತ ದೂರ ಸರಿಯುತ್ತಿದ್ದಾನೆ. "ಸಂಕ್ರಾಂತಿ" ಕೃಷಿ ಅವಲಂಬಿತ  ಕುಟುಂಬಗಳಿಗೆ ಭೂಮಿಯನ್ನು ವಂದಿಸುವ ದಿನವಾಗಿ ಉಳಿದಿದೆ.

ಸುಗ್ಗಿ ಹಬ್ಬ "ಸಂಕ್ರಾಂತಿ":
ಸಂಕ್ರಾಂತಿಯನ್ನು ಸುಗ್ಗಿ ಹಬ್ಬವೆಂದು ಕರೆಯಲು ಮುಖ್ಯವಾದ ಕಾರಣ "ಕೊಯ್ಲು ಮುಕ್ತಾಯ". ಆದ್ದರಿಂದ ಇದರ ಸಂಭ್ರಮಾಚರಣೆ ಜೋರಾಗಿರುತ್ತದೆ. ಸಂಕ್ರಾಂತಿ ಕೊಯ್ಲು ಮುಕ್ತ್ಯದೊಂದಿಗೆ ಚಳಿಗಾಲದ ಅಂತ್ಯವನ್ನೂ ಸೂಚಿಸುತ್ತದೆ.  ರೈತ ಈ ದಿನ ಎತ್ತು, ದನ, ಬೆಳೆದ ಆಹಾರ ಮತ್ತು ಭೂಮಿಯನ್ನು ದೇವರೆಂದು ಪೂಜಿಸುತ್ತಾನೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಆಚರಿಸುವ ಈ ಹಬ್ಬವನ್ನು ಮೊದಲನೇ ದಿನ ಭೂಮಿಗೆ, ಎರಡನೇ ದಿನ ತಮಗೆ ಮತ್ತು ಮೂರನೇ ದಿನ ಜಾನುವಾರುಗಳಿಗೆ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಪಟ್ಟಣಕ್ಕೆ ವಲಸೆಗೊಂಡ ಮಾನವರೊಂದಿಗೆ ಹೋಲಿಸಿದಲ್ಲಿ ರೈತಾಪಿ ವರ್ಗ ವರ್ಷದ ಒಂದು ದಿನವನ್ನಾದರೂ ಭೂಮಿ ಮತ್ತು ಪಶು ಪಕ್ಷಿಗಳಿಗೆ ಮೀಸಲಿಡು
ವುದು ಪ್ರಶಂಸನೀಯ.

ಸಂಕ್ರಾಂತಿ ಹಳ್ಳಿಗಳಲ್ಲಿ ಸುಗ್ಗಿಯ ಹಬ್ಬವಾದರೆ, ಪಟ್ಟಣಗಳಲ್ಲಿ ಎಳ್ಳು ಬೀರುವ ಹಬ್ಬವಾಗಿ ಪ್ರಚಲಿತವಾಗಿದೆ. ಎಳ್ಳು ಬೆಲ್ಲವನ್ನು ಹೆಂಗಳೆಯರು ಮನೆ ಮನೆಗೆ ಹೋಗಿ ವಿನಿಮಯಗೊಳಿಸುತ್ತಾರೆ. ಮದುವೆಯಾದ ಹೆಣ್ಣುಮಕ್ಕಳು ಮತ್ತೈದೆಯರಿಗೆ ಬಾಗಿನ ಕೊಟ್ಟು ಹಬ್ಬವನ್ನಾಚರಿಸುತ್ತಾರೆ. ಹುಗ್ಗಿ ಮತ್ತು ವಿಭಿನ್ನ ರಂಗೋಲಿಗಳು ಹಬ್ಬದ ಮತ್ತೊಂದು ವೈಶಿಷ್ಟ್ಯ. ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಪದ್ದತಿಯಿರುವುದರಿಂದ ಮಕ್ಕಳು ಮತ್ತು ದೊಡ್ಡವರಿಗೆ ಇದೊಂದು ಮನೋರಂಜನೆಯ ಹಬ್ಬ ಕೂಡ.

ಹಬ್ಬ ಯಾವುದೇ ಇರಲಿ, ಅದಕ್ಕೊಂದು ವಿಶೇಷವಿದ್ದೇ ಇರುತ್ತದೆ. ಬರಿ ಆಚರಣೆಯೊಂದೇ ಅಲ್ಲದೆ ಅದರ ವಿಶೇಷತೆಯನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ತಿಳಿದುಕೊಂಡ ವಿಷಯದೊಂದಿಗೆ, ನಮ್ಮ ಆಚಾರ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಜವಾಬ್ದಾರಿ. ಸಂಕ್ರಾಂತಿ ಹಬ್ಬದೊಂದಿಗೆ "ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡೋಣ".

This article bagged first place at "MILANA ADULT ESSAY COMPETITION - 2017"