ಬಾಲ್ಯಕ್ಕೂ, ಸವಿ ನೆನಪಿಗೂ ಅವಿನಾಭಾವ ಸಂಭಂಧ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಬಾಲ್ಯ ಮರೆಯಲಾಗದ ಅನುಭವ. ಮಲೆನಾಡಿಗಳಾದ ನನ್ನ ಬಾಲ್ಯ ಕೂಡ ನನಗೊಂದು ಮರೆಯಲಾಗದ ಅನುಭವ. ಹಸಿರುಟ್ಟ ಪ್ರಕೃತಿ, ಮುತ್ತಿನಂಥ ಮಳೆ ಹನಿಗಳೊಂದಿಗಿನ ಬಾಲ್ಯಕ್ಕೆ ಕಲೆಯ ಲೇಪನ. ಹೌದು, ಸಾಗರವೇ (ನನ್ನೂರು) ಹಾಗೆ. ಅದೆಷ್ಟೋ ಕಲಾವಿದರನ್ನು, ನೀನಾಸಂ ಇಂದ ಹೊರತಂದ ತವರೂರು. ಕಲಾವಿದರನ್ನೇ ಹೊರತಂದ ತವರೂರಲ್ಲಿ ಕಲಾ ಪ್ರದರ್ಶನಕ್ಕೆ ಕೊರತೆಯೇ? ನಾಟಕ ಮತ್ತು ಯಕ್ಷಗಾನ ಇಲ್ಲಿನ ಜನರ ದೈನಂದಿನ ಜೀವನ. ನಾಟಕ ಮತ್ತು ಯಕ್ಷಗಾನ ಕಲಾ ಜಗತ್ತಿನ ಬೇರೆ ಬೇರೆ ಪ್ರಾಕಾರಗಳಾದರೂ, ಕಲಾರಸಿಕರನ್ನು ಮತ್ತೊಂದು ಪ್ರಪಂಚಕ್ಕೆ ಕದ್ದೊಯ್ಯುವ ಕಲೆಗಳಿವು. ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿದ್ದಾದರೂ, ಕರ್ನಾಟಕದ ಕಲಾ ಸಂಸ್ಕೃತಿಯನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತಿಹಿಡಿದ ಹೆಮ್ಮೆ.
"ಯಕ್ಷಗಾನ"ಮೊದಲು ಕರ್ನಾಟಕದ ಕರಾವಳಿಯ ಭಾಗದಲ್ಲಿ ಉದಯವಾಯಿತು. ಬೆಳಗಾವಿಯಲ್ಲಿ ದೊರೆತಿರುವ ಪುರಾವೆಯ ಪ್ರಕಾರ "ಯಕ್ಷಗಾನ" ೧೫೫೬ CE ಯಷ್ಟು ಹಳೆಯದ್ದು. ಮದ್ರಾಸ್ ಯೂನಿವೆರ್ಸಿಟಿಯಲ್ಲಿ ಇಂದಿಗೂ ಇದರ ಒಂದು ಪ್ರತಿಯನ್ನು ನಾವು ನೋಡಬಹುದು. "ಯಕ್ಷಗಾನ"ದ ಮೂಲತಃ ಪದ "ಆಟ". ಇಂದಿಗೂ ಕರಾವಳಿ ಅಥವಾ ಮಲೆನಾಡು ಭಾಗದಲ್ಲಿ ಇದನ್ನು ಆಟವೆಂದೇ ಕರೆಯುತ್ತಾರೆ. ಆಟವೆಂದು ಸ್ಥಳೀಯ ಭಾಗದಲ್ಲಿ ಪ್ರಸಿದ್ಧವಾಗಿದ್ದ "ಯಕ್ಷಗಾನ"ಕ್ಕೆ, "ಯಕ್ಷಗಾನ"ವೆಂಬ ಪದದೊಂದಿಗೆ ಹೊರಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಡಾ।। ಶಿವರಾಮ ಕಾರಂತರದು. ಮೂಲತಃ ಕರಾವಳಿಯವರಾದ ಅವರು, ಸ್ವತಃ ಯಕ್ಷಗಾನ ಕಲಾವಿದರಾಗಿದ್ದರಲ್ಲದೆ, "ಯಕ್ಷಗಾನ"ವೆಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ. "ಯಕ್ಷಗಾನ" ಎಂಬ ಪದದ ಮೂಲ ಅರ್ಥ "ಯಕ್ಷ"ದ ಹಾಡು ಎಂಬುವುದಾಗಿ. "ಯಕ್ಷ"ವೆಂಬುದರ ಮೂಲ ಅರ್ಥವು ಭೂತ ಅಥವಾ ನಿಸರ್ಗವನ್ನು ಕಾಪಾಡುವ ಶಕ್ತಿ ಎಂಬುದಾಗಿದೆ. ಆದ್ದರಿಂದ ಸಾಮಾನ್ಯವಾಗಿ ಯಕ್ಷಗಾನದ ಕಥೆ ಮತ್ತು ಹಾಡುಗಳು ಪುರಾಣದಿಂದ ಬಂದಿದ್ದಾಗಿದ್ದು, ಒಳ್ಳೆಯ ಮತ್ತು ಕೆಟ್ಟದ್ದರ ನಡುವಿನ ಹೋರಾಟ ಮತ್ತು ಒಳ್ಳೆಯದರ ಜಯ - ಇದರ ಮೇಲೆ ಆಧಾರಿತವಾಗಿರುತ್ತದೆ.
ಯಕ್ಷಗಾನ ಪ್ರಾಕಾರಗಳು:
ಯಕ್ಷಗಾನವು ನೃತ್ಯ-ನಾಟಕಗಳನ್ನೊಳಗೊಂಡ ಪ್ರಾಕಾರವಾಗಿದ್ದು, ಶಾಸ್ತ್ರೀಯ ಮತ್ತು ಜಾನಪದ ಶೈಲಿಯ ನೃತ್ಯವನ್ನು ಅಳವಡಿಸಿಕೊಂಡಿರುತ್ತಾರೆ. ಹಿಂದಿನ ಕಾಲದಲ್ಲಿ ಯಕ್ಷಗಾನ ಪ್ರಸಂಗ ಅಥವಾ ಆಟವನ್ನು ಬಯಲು ರಂಗ ಮಂದಿರಗಳಲ್ಲಿ ನಡೆಸುತ್ತಿದ್ದರು, ಆಧುನಿಕತೆಗೆ ತಕ್ಕಂತೆ ಇಂದಿನ ದಿನಗಳಲ್ಲಿ ರಂಗ ಮಂದಿರದ ವ್ಯವಸ್ಥೆ ಕೂಡ ಉತ್ತಮಗೊಂಡಿದೆ. "ಆಟ"ವನ್ನು ಸಾಮಾನ್ಯವಾಗಿ ರಾತ್ರಿ ಆರಂಭಿಸಿ, ಮುಂಜಾನೆಯವರೆಗೂ ನಡೆಸುತ್ತಾರೆ. ಹೀಗೆ ನಡೆಸುವ ಯಕ್ಷಗಾನದಲ್ಲಿ ವಿವಿಧ ಬಗೆಯ ವಿಧಾನಗಳಿವೆ.
ಯಕ್ಷಗಾನದ ಎರಡು ಮುಖ್ಯ ವಿಧಾನಗಳು ಈ ಕೆಳಗಿನಂತಿದೆ:
೧. ಪಡುವಲಪಾಯ
೨. ಮೂಡಲಪಾಯ
ಪಡುವಲಪಾಯ:
ಈ ವಿಧವಾದ ಯಕ್ಷಗಾನವು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಕೆಲ ಭಾಗಗಳಲ್ಲಿ ಇನ್ನೂ ಚಾಲನೆಯಲ್ಲಿದೆ. "ಪಡುವಲಪಾಯ"ವನ್ನು ೨ ಉಪ ವಿಭಾಗಗಳಾಗಿ ವಿಂಗಡಿಸಿದ್ದಾರೆ.
೧. ತೆಂಕು ತಿಟ್ಟು (ದಕ್ಷಿಣ ಶೈಲಿ)
೨. ಬಡಗು ತಿಟ್ಟು (ಉತ್ತರ ಶೈಲಿ)
೧. ತೆಂಕು ತಿಟ್ಟು (ದಕ್ಷಿಣ ಶೈಲಿ): ಈ ವಿಧವಾದ ಯಕ್ಷಗಾನವು ಕಾಸರಗೋಡು, ಮಂಗಳೂರು, ಸಂಪಾಜೆ, ಪುತ್ತೂರು, ಕಾರ್ಕಳ, ಉಡುಪಿ ಭಾಗಗಳಲ್ಲಿ ಚಾಲತಿಯಲ್ಲಿದೆ. ಈ ಪ್ರಾಕಾರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಭಾವ ಬಹುವಾಗಿರುತ್ತದೆ. ಇದರಲ್ಲಿ ಉಪಯೋಗಿಸುವ ಮದ್ದಳೆಯಲ್ಲಿಯೇ ಇದನ್ನು ಸರಾಗವಾಗಿ ಗುರುತಿಸಬಹುದು. ಥೆಂಕುತಿಟ್ಟಿನ ಸಾಂಪ್ರದಾಯಿಕ ಮೂರು ಬಣ್ಣಗಳೆಂದರೆ - ರಾಜಬಣ್ಣ, ಕಾಟುಬಣ್ಣ ಮತ್ತು ಸ್ತ್ರೀಬಣ್ಣ. ಥೆಂಕುತ್ತಿಟ್ಟಿನ ಮತ್ತೊಂದು ವಿಶೇಷವೆಂದರೆ ಜೋರಾದ ಭಾಗವತಿಕೆ, ಜೋರಾದ ಚಂಡೆ, ಮದ್ದಳೆ ಮತ್ತು ಜಾಗಟೆಗಳ ಬಳಕೆಯನ್ನು ಇಲ್ಲಿ ಮಾಡುತ್ತಾರೆ. ಇನ್ನು ಕುಣಿತಕ್ಕೆ ಬಂದರೆ ತೆಂಕು ತಿಟ್ಟು ಬಾಹುವಾದ "ಧಿಗಿಣ"ವನ್ನು ಬಳಸುತ್ತದೆ. ಇದರಲ್ಲಿ ಜಿಗಿತ ಮತ್ತು ತಿರುಗುತ್ತ ಜಿಗಿಯುವ ಕುಣಿತ ಹೆಚ್ಚಿರುತ್ತದೆ. ತೆಂಕುತಿಟ್ಟು ನೃತ್ಯಕ್ಕೆ ಕೂಡ ಬಹು ಆದ್ಯತೆ ಕೊಡುತ್ತದೆ. ಥೆಂಕುತಿತ್ತು ಅತಿ ವೇಗವಾದ ನೃತ್ಯ ಶ್ಯಲಿಯನ್ನು ಹೊಂದಿರುವದರಿಂದ, ಇಂದಿಗೂ ಅತಿ ಪ್ರಸಿದ್ದವಾದ ಯಕ್ಷಗಾನ ಶೈಲಿ ಇದಾಗಿದೆ.
ಧರ್ಮಸ್ಥಳ ಮತ್ತು ಕಟೀಲು ದುರ್ಗಾಪರಮೇಶ್ವರಿ ಮೇಳಗಳು ತೆಂಕುತಿಟ್ಟನ್ನು ಪ್ರಸಿದ್ದಿಗೆ ತಂದವು. ಸಾಮಾನ್ಯವಾಗಿ ಥೆಂಕುತಿಟ್ಟು ಕರಾವಳಿಯೊಂದೇ ಅಲ್ಲದೆ, ಹೊರ ಭಾಗದಲ್ಲಿ ಪ್ರಖ್ಯಾತಿ ಪಡೆದಿದೆ.
೨. ಬಡಗು ತಿಟ್ಟು (ಉತ್ತರ ಶೈಲಿ): ಈ ವಿಧವಾದ ಯಕ್ಷಗಾನವು ಉತ್ತರ ಉಡುಪಿ, ಕುಂದಾಪುರ, ಬೈಂದೂರ್, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಚಾಲತಿಯಲ್ಲಿದೆ. ಬಡಗು ತಿಟ್ಟಿನಲ್ಲಿ ಮಾತುಗಾರಿಕೆ ಮತ್ತು ಮುಖ ಭಾವಕ್ಕೆ ಹೆಚ್ಚಿನ ಆದ್ಯತೆ. ನೃತ್ಯ ಸಾಮಾನ್ಯವಾಗಿ ಪಾತ್ರಕ್ಕೆ ತಕ್ಕಂತಿರುತ್ತದೆ. ಇದರಲ್ಲಿ ಕರ್ನಾಟಕದ ಸಾಂಪ್ರದಾಯಿಕ ಚಂಡೆಯನ್ನು ಉಪಯೋಗಿಸಲಾಗುತ್ತದೆ. ಶಿವರಾಮ ಕಾರಂತರ "ಯಕ್ಷಗಾನ ಮಂದಿರ"ವು (ಸಾಲಿಗ್ರಾಮ) ಬಡಗು ತಿಟ್ಟಿನ ಯಕ್ಷಗಾನದ್ದಾಗಿದೆ. ಇನ್ನು ಶಿವರಾಮ ಹೆಗಡೆಯವರು ಹುಟ್ಟು ಹಾಕಿದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೂಡ ಬಡಗು ತಿಟ್ಟು ಶೈಲಿಯದ್ದಾಗಿದೆ.
ಮೂಡಲಪಾಯ:
ಈ ವಿಧವಾದ ಯಕ್ಷಗಾನವು ಕರ್ನಾಟಕ ಪೂರ್ವದ ಕೆಲ ಜಿಲ್ಲೆಗಳಾದ ಚನ್ನರಾಯ ಪಟ್ಟಣ, ಅರಸೀಕೆರೆ, ನಾಗಮಂಗಲ, ತುರುವೇಕೆರೆ, ಹಿರಿಯೂರು, ಚಳ್ಳಕೆರೆ, ಮತ್ತು ಉತ್ತರದ ಕೆಲ ಭಾಗಗಳಲ್ಲಿ ಚಾಲತಿಯಲ್ಲಿದೆ. ಈ ವಿಧಾನದಲ್ಲಿ ಕೂಡ ೨ ಉಪ ವಿಭಾಗಗಳಿವೆ:
೧. ದೊಡ್ಡಾಟ
೨. ಸಣ್ಣಾಟ
ಹಿಮ್ಮೇಳ ಮತ್ತು ಮುಮ್ಮೇಳ:
ಇನ್ನು ಪ್ರದರ್ಶಕರ ಬಗ್ಗೆ ಹೇಳುವುದಾದರೆ, "ಮುಮ್ಮೇಳ" ಮತ್ತು "ಹಿಮ್ಮೇಳ"ಗಳಾಗಿ ಪ್ರದರ್ಶಕರನ್ನು ವಿಂಗಡಿಸುತ್ತಾರೆ. ಹಿಮ್ಮೇಳವನ್ನು "ಹಿಮ್ಮೇಳ" ಅಥವಾ ಭಾಗವತರೆಂದು ಕರೆಯುತ್ತಾರೆ. ಕಥೆ ಅಥವಾ ಹಾಡಿನ ಭಾಗವನ್ನು ಹಿಮ್ಮೇಳದವರು ನಡೆಸಿ ಕೊಡುತ್ತಾರೆ. ಸಾಮಾನ್ಯವಾಗಿ ಚಂಡೆ ಮತ್ತು ಮೃದಂಗದೊಂದಿಗೆ ಯಕ್ಷಗಾನ ಪದವನ್ನು ಹಾಡುತ್ತಾರೆ. ಇನ್ನು ಹಾಡಿಗೆ ತಕ್ಕಂತೆ ಕುಣಿದು ಕಥೆಗೆ ನಿಜ ರೂಪ ಕೊಡುವವರು ಯಕ್ಷಗಾನ ಕಲಾವಿದರು. ಇವರನ್ನು "ಮುಮ್ಮೇಳ"ವೆಂದು ಕರೆಯುತ್ತಾರೆ.
೧. ಹಿಮ್ಮೇಳ: ಹಿಮ್ಮೇಳ ಅಥವಾ ಭಾಗವತಿಕೆಯವರ ಕೆಲಸ ಮುಮ್ಮೇಳದವರಷ್ಟೇ ಮಹತ್ವದ್ದಾಗಿದೆ. ರಂಗ ಪ್ರವೇಶ ಮಾಡುವ ಮೊದಲಿಗರೂ "ಹಿಮ್ಮೇಳ"ದವರೆ. ಹೀಗೆ ರಂಗ ಪ್ರವೇಶ ಮಾಡಿದ ನಂತರ ಕಥೆಯನ್ನು ನೈಜ ರೀತಿಯಲ್ಲಿ ತೆಗೆದುಕೊಂಡು ಹೋಗಿ ಪ್ರದರ್ಶಕರನ್ನು ನಿರ್ದೇಶಿಸುವವರೂ ಇವರೇ. ಏರು ಧ್ವನಿಯಲ್ಲಿ ಪದ ಹಾಡುವದೊರೊಂದಿಗೆ, ಕಥೆಯನ್ನು ಕೂಡ ಚಾಚೂ ತಪ್ಪದೆ ಹೇಳುವ ಇವರ ಪಾತ್ರ ಯಕ್ಷಗಾನದಲ್ಲಿ ಮಹತ್ತರವಾದುದು.
೨. ಮುಮ್ಮೇಳ: ಯಕ್ಷಗಾನದ ಅತ್ಯಾಕರ್ಷಕ ಗುಣ ಲಕ್ಷಣವೆಂದರೆ, ಕಲಾವಿದರು ತೊಡುವ ಬಣ್ಣ ಬಣ್ಣದ ಉಡುಗೆಗಳು. ನೋಡಲು ಮನಮೋಹಕವಿರುವ ಉಡುಗೆಗಳನ್ನು ಧರಿಸಲು ಕಲಾವಿದ ತೆಗೆದುಕೊಳ್ಳುವ ಸಮಯ, ಅದರ ಹಿಂದಿನ ಶ್ರಮ ಮತ್ತು ಭಾರೀ ತೂಕದ ವೇಷದೊಂದಿಗೆ ಕುಣಿಯುವ ಕಲಾವಿದನ ತಾಳ್ಮೆಗೆ ಎಂಥಹ ಪ್ರೇಕ್ಷಕ ಕೂಡ ಮೆಚ್ಚುವಂಥದ್ದೇ. ಇನ್ನು ಮೋರೆಯ (ಮುಖದ) ಅಲಂಕಾರಕ್ಕೆ ತೆಗೆದುಕೊಳ್ಳುವ ಸಮಯವನ್ನು ಮರೆಯಲಸಾಧ್ಯವೇ? ಇಷ್ಟಲ್ಲದೆ ನಿಮಗೊಂದು ತಿಳಿದಿರದ ಸತ್ಯವೇನೆಂದರೆ, ಹೊಟ್ಟೆ ತುಂಬಿದ್ದರೆ ಕಲಾವಿದನಿಗೆ ಕುಣಿಯಲಸಾಧ್ಯ. ಆದ್ದರಿಂದ ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ಹಸಿದುಕೊಂಡೇ ಪ್ರಸಂಗ ನೆಡೆಸಿಕೊಡುತ್ತಾರೆ. ಒಬ್ಬ ಕಲಾವಿದನ ಮಹತ್ತರ ಕಲಾಸೇವೆಗೆ, ಇದಕ್ಕಿಂತ ಬೇರೆ ಉದಾಹರಣೆ ಬೇಕೇ?
ಕಲಾವಿದರು:
ಯಕ್ಷಗಾನದಲ್ಲಿ ಕಲೆಯ ಎಲ್ಲಾ ವಿಧವನ್ನು ನೋಡಬಹುದು. ಯಕ್ಷಗಾನದಲ್ಲಿ ಸಂಗೀತವಿದೆ, ನೃತ್ಯವಿದೆ, ಪುರಾಣ-ಇತಿಹಾಸದ ಕಥೆಗಳಿವೆ, ಅಭಿನಯವಿದೆ, ನಿರ್ದೇಶನವಿದೆ - ಇದರಿಂದಲೇ ಯಕ್ಷಗಾನ ವೈಶಿಷ್ಟ್ಯವಾಗಿ ಕಾಣಲ್ಪಡುತ್ತದೆ. ಇಂತಹ ವೈಶಿಷ್ಟ್ಯವನ್ನು ಜೀವನವಾಗಿಸಿಕೊಂಡು ಬದುಕಿ ಹೋದ ಮತ್ತು ಬದುಕುತ್ತಿರುವ ಅನೇಕ ಕಲಾವಿದರು ನಮ್ಮೊಂದಿಗಿದ್ದಾರೆ. ಅನೇಕರು ರಾಷ್ಟ್ರ ಮಟ್ಟದ ಪ್ರಶಸ್ತಿ ಗೆದ್ದು, ಕನ್ನಡ ತಾಯಿಯ ಋಣ ತೀರಿಸಿದ್ದಾರೆ. ಅಂತಹ ಕಲಾವಿದರ ಹೆಸರನ್ನು ಉಲ್ಲೇಖಿಸುವಲ್ಲಿ, ನನ್ನದೊಂದು ಸಣ್ಣ ಪ್ರಯತ್ನ.
ಭಾರತದ ಅತೀ ಶ್ರೇಷ್ಠ ಪ್ರಶಸ್ತಿಯಾದ "ಪದ್ಮಶ್ರೀ"ಯನ್ನು ಯಕ್ಷಗಾನದ ಮುಡಿಗೇರಿಸಿದ ಕೀರ್ತಿ "ಚಿಟ್ಟಾಣಿ ರಾಮಚಂಡ್ರ ಹೆಗಡೆ"ಯವರದ್ದು. ಇನ್ನು ಯಕ್ಷಗಾನಕ್ಕೆ ರಾಷ್ಟ್ರಪತಿ ಪ್ರಶಸ್ತಿ ತಂದುಕೊಟ್ಟ ಕೀರ್ತಿ "ಕೆರೆಮನೆ ಶಿವರಾಮ ಹೆಗಡೆ"ಯವರದ್ದು.
ಇವರಲ್ಲದೆ ಹೆಸರಿಸಲೇಬೇಕಾದ ಕಲಾವಿದರೆಂದರೆ:
ಹಿಮ್ಮೇಳ: ಬಲಿಪ ರಾಘವೇಂದ್ರ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ಪುತ್ತಿಗೆ ರಾಮಕೃಷ್ಣ ಜೋಯಿಸ್, ದಾಮೋದರ ಮಂಡೆಚ್ಚ, ನಲ್ಲೂರು ಮರಿಯಪ್ಪ ಆಚಾರ್, ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಕಡತೋಕ ಮಂಜುನಾಥ ಭಾಗವತ, ಪದ್ಯಾಣ ಗಣಪತಿ ಭಟ್, ಕಡತೋಕ ಕೃಷ್ಣ ಭಾಗವತ, ನಿಬ್ಬುರು ನಾರಾಯಣ ಹೆಗಡೆ, ಮುಂತಾದವರು.
ಮುಮ್ಮೇಳ: ವಂದಾರು ಬಸವ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಬು ಹೆಗಡೆ, ಶಂಕರನಾರಾಯಣ ಸಾಮಗ, ಜಯರಾಮ ಶೆಟ್ಟಿ ಹಾಲಾಡಿ, ಕೆರೆಮನೆ ಶಿವಾನಂದ ಹೆಗಡೆ, ಕೊಡದಕುಳಿ ರಾಮಚಂದ್ರ ಹೆಗಡೆ, ವೀರಭದ್ರ ನಾಯಕ, ಗೋವಿಂದ ನಾಯಕ್ ಕೊನಳ್ಳಿ, ಗೋಡೆ ನಾರಾಯಣ ಹೆಗಡೆ, ಮಂಟಪ ಪ್ರಭಾಕರ್ ಉಪಾಧ್ಯ, ಅನಂತ ಹೆಗ್ಡೆ ಕೊಳಗಿ, ಕುರಿಯ ವಿಠ್ಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್ ಇನ್ನೂ ಮುಂತಾದವರು.
"ಯಕ್ಷಗಾನ"ವನ್ನು ಕರ್ನಾಟಕವಷ್ಟೇ ಅಲ್ಲದೆ, "ಯಕ್ಷಗಾನಮು” ಎಂಬ ಹೆಸರಿನಲ್ಲಿ ಆಂಧ್ರ ಪ್ರದೇಶದಲ್ಲೂ ಕೂಡ ಕಾಣಬಹುದು. "ಯಕ್ಷಗಾನ" ಕನ್ನಡಿಗರಾದ ನಮ್ಮ ನಿಮ್ಮೆಲ್ಲರ ಹೆಮ್ಮೆ. ಅದು ನಮ್ಮ- ನಿಮ್ಮೆಲ್ಲರ ತವರೂರಿನ ಕಲೆ. ಅನೇಕ ಭಾರಿ ಸರ್ಕಾರ ಅಥವಾ ಯಾವುದೇ ಸಂಘ ಸಂಸ್ಥೆಯಿಂದ ಸಹಾಯ ಸಿಗದೇ ಇದ್ದರೂ ಯಕ್ಷಗಾನ ಕಲಾವಿದರು ಹಿಂದೇಟಾಕದೆ, ಯಕ್ಷಗಾನವನ್ನು ಅಭಿನಯಿಸಿ, ಶಿಭಿರಗಳನ್ನು ನೆಡೆಸಿ ಯುವ ಪೀಳಿಗೆ ನಡೆಸಿಕೊಂಡು ಹೋಗುವಂತೆ ಮಾಡಿದ್ದಾರೆ. ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಹಿಸುವುದು ನಾವು ಇಂತಹ ಕಲಾವಿದರಿಗೆ ಕೊಡುವ ಶ್ರೇಷ್ಠ ಗೌರವ. ಯಕ್ಷಗಾನ ಉಳಿಸಿ, ಬೆಳಸಿ.
ಉಪಯುಕ್ತ ಮಾಹಿತಿಯುಳ್ಲ ಸುಂದರ ಬರಹ!
ReplyDelete