Tuesday, September 6, 2016

ನಮ್ಮ ಮಕ್ಕಳಿಗೆ ಮಾತೃ ಭಾಷೆ ಕಲಿಸುವುದು ಎಷ್ಟು ಮುಖ್ಯ?




ಕನ್ನಡ ಎನೆ ಕುಣಿದಾಡುವುದೆನ್ನೆದೆ .. 
ಕನ್ನಡ ಎನೆ ಕಿವಿ ನಿಮಿರುವುದು ... 

ಶಾಲಾ ದಿನಗಳಲ್ಲಿ ಕೇಳಿದ ರಾಷ್ಟ್ರಕವಿ ಕುವೆಂಪೂರವರ ಕವನದ ಸಾಲುಗಳಿವು. ಮೇಲಿನಸಾಲುಗಳು ಅಕ್ಷರಶಃ ಸತ್ಯ. ಕನ್ನಡ ಎಂದಾಕ್ಷಣ ನಮ್ಮ ಮನಸ್ಸು ಕುಣಿದಾಡುವುದೆಂದರೆ, ಅದಕ್ಕೊಂದು ಕಾರಣವಿದೆ. ಅದು ನಮ್ಮೆಲ್ಲರ ಪ್ರೀತಿಯ ಮಾತೃ ಭಾಷೆ. ಮಾತೆ ಹಾಗೂ ಮಾತೃ ಭಾಷೆಯೇ ಹಾಗೆ. ಸಾವಿರಾರು ಜನರ ಮಧ್ಯೆ ನಮ್ಮ ತಾಯಿ ಯಾರೆಂದು ನಾವು ಗುರುತಿಸಬಲ್ಲೆವು. ಹಾಗೆಯೇ, ನೂರಾರು ಭಾಷೆಗಳ ನಡುವೆ ಕನ್ನಡವನ್ನು ಕೇಳಿದರೆ ಖಂಡಿತಾ ಕಿವಿ ನಿಮಿರುತ್ತದೆ. ಹಾಗಾದರೆ ಮಾತೃ ಭಾಷೆ ಯಾವುದೇ ಇರಲಿ ಅದಕ್ಕೇಕೆ ಅಷ್ಟೊಂದು ಮಹತ್ವ? ಹೆಸರೇ ಹೇಳುವಂತೆ,  ತಾಯಿ ತನ್ನ ಮಗುವನ್ನು ಗರ್ಭದಲ್ಲಿ ಹೊರುವಾಗ ಮಾತನಾಡಿದ ಭಾಷೆಯದು. ನಾವು ನಮ್ಮ ಕಿವಿಯಲ್ಲಿ ಕೇಳಿದ ಮೊದಲ ಭಾಷೆ. ತಾಯಿ-ಮಗುವಿನ ಭಾವನೆಗಳನ್ನು ಸಂಪರ್ಕಿಸಲು ಸಹಾಯ ಮಾಡಿದ ಭಾಷೆ. ಹಾಗಾದರೆ ನಮ್ಮ ಮಾತೃ ಭಾಷೆ ಕನ್ನಡವನ್ನು ನಾವು ಎಷ್ಟು ಪೋಷಿಸಿ ಬೆಳೆಸುತ್ತಿದ್ದೇವೆ?

ಕಾಲಾನುಸಾರವಾಗಿ, ಸಂದರ್ಭಾನುಸಾರವಾಗಿ ನಾವು ಕರ್ನಾಟಕವನ್ನು ಬಿಟ್ಟು ಬಹುದೂರ ಬಂದಿದ್ದೇವೆ. ಅಷ್ಟೇ ಏಕೆ ಅನಿವಾಸಿ ಭಾರತೀಯರೆಂಬ ಹಣೆಪಟ್ಟಿಯನ್ನು ಕೂಡ ಪಡೆದಿದ್ದೇವೆ. ತಾಯಿಯಿಂದ ದೂರಾದಾಕ್ಷಣ ಆಕೆಯನ್ನು ಮರೆಯಲು ಸಾಧ್ಯವೇ? ಕರ್ನಾಟಕದಿಂದ ದೂರಾದಾಕ್ಷಣ ಕನ್ನಡವನ್ನು ಮರೆಯಬೇಕೆಂದೇ? ಅನಿವಾಸಿ ಕನ್ನಡಿಗಳಾದ ನಾನು ಅನೇಕ ಜನ ಕನ್ನಡಿಗರನ್ನು ನೋಡಿದ್ದೇನೆ. ಕನ್ನಡ ಕೂಟಗಳಿಗೆ, ಕನ್ನಡ ಸಿನೆಮಾಗಳಿಗೆ ಹೋಗುವುದೆಂದರೆ ತುಂಬಾ ಆಸಕ್ತಿ ತೋರಿಸುತ್ತಾರೆ. ಅಲ್ಲಿ ಬಂದಾಕ್ಷಣ ಸ್ನೇಹಿತರೊಂದಿಗೆ, ಮಕ್ಕಳೊಂದಿಗೆ, ಕಾರ್ಯಕರ್ತರೊಂದಿಗೆ Englishನಲ್ಲಿ ಮಾತನಾಡುವುದು. ಕನ್ನಡ ಮಾತನಾಡಿದರೆ ಎಲ್ಲಿ ತಮ್ಮ ಗೌರವಕ್ಕೆ ಧಕ್ಕೆಯಾಗಿ ಬಿಡುವುದೆಂಬ ಭಯ. ಸ್ನೇಹಿತರೆ, ಕನ್ನಡ ನಮ್ಮನ್ನು ಅವಮಾನಿಸಿದೆಯೇ? ಅಥವಾ ನಮ್ಮನ್ನು ಪೋಷಿಸಿ, ಬೆಳೆಸಿ ಈ ಮಟ್ಟಕ್ಕೆ ಬೆಳೆಯಲು ಸಹಾಯ ಮಾಡಿದೆಯೇ? ನೀವೇ ಯೋಚಿಸಿ. ನಾವು ಮೊದ ಮೊದಲು ಭಾವನೆಗಳನ್ನು ತೋರಿಸಿದ್ದು ಕನ್ನಡದಲ್ಲಿ, english, hindi ಅಷ್ಟೇ ಏಕೆ ಕಲಿತ ನೂರಾರು ಭಾಷೆಗಳನ್ನು  ಮನದಾಳದಲ್ಲಿ ಅರ್ಥೈಸಿಕೊಂಡಿದ್ದು ಕನ್ನಡದಲ್ಲಿ. ಹೀಗಿರುವಾಗ ಮಾತನಾಡಲು ಹಿಂದು-ಮುಂದು ನೋಡುವುದೇಕೆ? ಕನ್ನಡ ನಿಮ್ಮನ್ನು ಬೆಳೆಸಿರುವಾಗ, ಕನ್ನಡವನ್ನು ಬೆಳೆಸಲು ನೀವೇಕೆ ಹಿಂಜರಿಯುತ್ತೀರಿ?

ಕನ್ನಡವನ್ನು ಬೆಳೆಸಬೇಕೆಂದರೆ ನೀವು ಸಂಸ್ಥೆ ಕಟ್ಟಿ ಪ್ರಚಾರ ಕೊಡಬೇಕೆಂದಲ್ಲ. ನಿಮಗೆ ಗೊತ್ತಿರುವ ಕನ್ನಡವನ್ನು, ಕನ್ನಡಿಗರೊಂದಿಗೆ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವವರೊಂದಿಗೆ ಮಾತನಾಡಿ. ಮುಖ್ಯವಾಗಿ, ನೀವು ತಂದೆ-ತಾಯಿಗಳಾಗಿದ್ದಲ್ಲಿ ಮನೆಯಲ್ಲಿ ಕನ್ನಡ ಮಾತಾಡಿ.  ನಾವು ಕನ್ನಡ ಪೋಷಿಸುವುದೆಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯುತವಾದ ಕೆಲಸ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು. ಇತ್ತೀಚಿನ ಒಂದು ಅಧ್ಯನದ ಪ್ರಕಾರ, ಮಾತೃಭಾಷೆ ಚೆನ್ನಾಗಿ ಗೊತ್ತಿರುವ ಮಕ್ಕಳ ಗ್ರಹಣ ಶಕ್ತಿ ಹೆಚ್ಚಾಗಿರುತ್ತದೆ ಎಂದು ಸಾಬೀತಾಗಿದೆ. ಏಕೆಂದರೆ ಅಂತಹ ಮಕ್ಕಳು ಯಾವುದೇ ಭಾಷೆಯನ್ನು, ವಿಷಯವನ್ನು ತಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾತೃ ಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಾರೆ.  ಇದನ್ನು ಅಮೆರಿಕನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್ ಕೂಡ ಒಪ್ಪಿಕೊಂಡಿದೆ. ಅಂತಹ ಮಕ್ಕಳು ಮಾತೃಭಾಷೆಯೊಂದೇ ಅಲ್ಲದೆ ಭಾಷಾ ಕಲಿಕೆಯಲ್ಲಿ ಕೂಡ ಮುಂದಿರುತ್ತಾರೆ. 
ನಾವು ನಮ್ಮ ಮಕ್ಕಳಿಗೆ ಮಾತೃಭಾಷೆ ಕಳಿಸುವದರಿಂದಾಗುವ ಉಪಯೋಗಗಳು:
೧. ಗ್ರಹಣ ಶಕ್ತಿ ಹೆಚ್ಚಾಗುತ್ತದೆ. 
೨. ಭಾಷೆ ಕಲಿಸುವದರಿಂದ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. 
೩. ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. 
೪. ಮಾತೃಭಾಷೆ ಕಲೆ-ಸಂಸ್ಕೃತಿಯ ಪ್ರತೀಕ. ಕಲೆ-ಸಾಹಿತ್ಯದ ಆಸಕ್ತಿಯಿರುವ ಮಕ್ಕಳಿಗೆ, ಕಲಿಕೆಗೆ ಭಾಷೆಯ ಸಹಾಯ ಸಿಗುತ್ತದೆ.
೫. ಮುಂದೊಂದು ದಿನ ನಿಮ್ಮ ಮಗು ತನ್ನ ಬೇರನ್ನು ಅರಸಿ ತಾಯ್ನಾಡಿಗೆ ಮರಳಿದಾಗ, ನಿಮ್ಮ ಸಹಾಯದ ಅವಶ್ಯಕತೆ ಇರುವುದಿಲ್ಲ. 

ಪೋಷಕರೇ, ಹೊರಗಿನ ಸಮಾಜ ಮತ್ತು ಸ್ಥಳೀಯ ಭಾಷೆಯ (native language) ಬಗ್ಗೆ ಭಯ ಪಡಬೇಡಿ. ಕೆಲವೊಂದು ವಿಷಯಗಳು ನಮ್ಮ ಸಮಾಜದಿಂದ ಉಚಿತ ಕೊಡುಗೆಯಾಗಿ ಸಿಗುತ್ತವೆ. ಅದರಲ್ಲಿ ಭಾಷೆ ಕೂಡ ಒಂದು. ನೀವು ಕಲಿಸದೇ ಇದ್ದರೂ ಕೂಡ, ನಿಮ್ಮ ಮಗು Englishaನ್ನು ಚೆನ್ನಾಗಿ ಮಾತನಾಡುತ್ತದೆ. ಏಕೆಂದರೆ ಅದು ವ್ಯಾವಹಾರಿಕ ಭಾಷೆಯಾಗಿರುವದರಿಂದ, ಮಗು ಬಹು ಬೇಗ ಕಲಿಯಬಲ್ಲದು. ಉಚಿತವಾಗಿ ಬರುವಾಗ, ಅದನ್ನು ಉಪಯೋಗಿಸಿಕೊಳ್ಳಿ ಮತ್ತು ನಿಮ್ಮ ಮಕ್ಕಳಿಗೆ ಮಾತೃ ಭಾಷೆ ಕಲಿಸಿ. ಕನ್ನಡ ಉಳಿಸಿ, ಬೆಳೆಸಿ. 
ಹಾಗಾದರೆ ಪೋಷಕರಾದ ನೀವು ಮಾಡಬೇಕಾಗಿರುವುದಾದರೂ ಏನು ?
೧. ನಿಮ್ಮ ಮಕ್ಕಳು, ನಿಮ್ಮ ಮಾತೃ ಭಾಷೆಯನ್ನು ಪ್ರೀತಿಸಲು ಅನುವು ಮಾಡಿ ಕೊಡಿ. 
೨. ವ್ಯಾವಹಾರಿಕ ಭಾಷೆಯನ್ನು ಹೊರಗಿನ ಪ್ರಪಂಚಕ್ಕೆ ಕಲಿಸಲು ಬಿಡಿ. 
೩. ಮನೆಯಲ್ಲಿ ಕನ್ನಡ ಮಾತಾಡಿ. ಕಥೆ ಹೇಳುವಾಗ ಆದಷ್ಟು ಕನ್ನಡ ಬಳಸಿ. 
೪. ಕನ್ನಡ ಹಾಡುಗಳನ್ನು ಕೇಳಲು ಅನುವು ಮಾಡಿಕೊಡಿ. 
೫. Internetಲ್ಲಿ ಸಿಗುವ ಕನ್ನಡ ಪುಸ್ತಕ, ಕನ್ನಡ ಪದ್ಯಗಳ ಪರಿಚಯ ಮಾಡಿಸಿ.
 ೬. ಹತ್ತಿರವಿರುವ ಕನ್ನಡ ಕಲಿಕಾ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಿ. 
೭. ರಜಾ ದಿನಗಳಲ್ಲಿ ನಿಮ್ಮವರನ್ನು ಭೇಟಿಯಾಗಲು ಅವಕಾಶ ಮಾಡಿ ಕೊಡಿ. 
೮. ನಮ್ಮ ಕಲೆ-ಸಂಸ್ಕೃತಿಯ ಪರಿಚಯ ಮಾಡಿಸಿ. 

ನಮ್ಮ ಭಾಷೆಯನ್ನು ನಾವು ಪ್ರೀತಿಸಿದರೆ, ಉಳಿದವರೂ ಪ್ರೀತಿಸುತ್ತಾರೆ. ಕನ್ನಡಿಗರಾದ ನಮಗೆ, ನಮ್ಮ ಕಲೆ-ಸಂಸ್ಕೃತಿಯನ್ನು ಉಳಿದ ಪ್ರಪಂಚಕ್ಕೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕಲೆ-ಸಂಸ್ಕೃತಿಯ ಪರಿಚಯಕ್ಕೊಂದು ಒಳ್ಳೆಯ ವೇದಿಕೆ AKKA. ಬಿಡುವಿದ್ದರೆ, ನೀವು ನಿಮ್ಮವರೊಂದಿಗೆ ಭೇಟಿ ಕೊಡಿ. ನಮ್ಮ ಭಾಷೆ, ಸಂಸ್ಕೃತಿ, ಕಲೆ, ಆಹಾರ ಪದ್ದತಿಯ ಬಗ್ಗೆ ಪರಿಚಯ ಮಾಡಿ ಕೊಡಿ. 

This article is one of the only 16 articles published in AKKA 2016 in the book called "anivaasigaLalli kannada prajne"








Thursday, August 25, 2016

ಮನಸ್ಸಿಗೆ ಮುದ ನೀಡುವ ಮನೋಲ್ಲಾಸಿನಿ, "ಹಿಂದೋಳ"..




ಕೆಲವೊಂದು ರಾಗಗಳೇ ಹಾಗೆ. ಒಮ್ಮೆ ಕೇಳಿದರೆ, ಕಿವಿಯೊಳಗೆ ದಿನವೆಲ್ಲ ಗುಯ್ ಗುಡುತ್ತಿರುತ್ತವೆ. ಬೇರೆ ಹಾಡುಗಳನ್ನರಸಿ ಬಾಯಿ ಹೊರಟರೂ, ಮನಸ್ಸು ಅಲ್ಲೇ ಸ್ಥಬ್ಧವಾಗುವಂತೆ ಮಾಡಿರುತ್ತವೆ. ಹೀಗೊಂದು ಹಾಡು ಮೊನ್ನೆ ನನ್ನೊಳಗೆ ಹೊಕ್ಕು ಕಿವಿಯನ್ನು ಕೊರೆಯುತ್ತಿತ್ತು. ಹಾಡು ತಮಿಳು ಭಾಷೆಯದ್ದಾದರೂ ಮನಸಲ್ಲಿ ಬೇರೂರಿದ್ದು ಅದರ ರಾಗ. ಅದೇ.. ರಾಗ "ಹಿಂದೋಳ". 

ಹಿಂದೋಳ ಕರ್ನಾಟಕ ಶಾಸ್ತ್ರೀಯ ಪ್ರಕಾರದ ಒಂದು ರಾಗ.  ಇದಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನವಿದೆ. ಇದು ಔಡವ ರಾಗ (ಪಂಚಸ್ವರ scale ಅಥವಾ pentatonic scale). ಇದೊಂದು ಜನ್ಯ ರಾಗವೂ ಹೌದು (ಇದರಲ್ಲಿ ಸಪ್ತ ಸ್ವರಗಳಿರುವುದಿಲ್ಲವಾದ್ದರಿಂದ). ಕರ್ನಾಟಕ ಶಾಸ್ತ್ರೀಯ ಪ್ರಕಾರದ "ಹಿಂದೋಳ" ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಪ್ರಕಾರದ "ಹಿಂದೋಳ್" ಬೇರೆ ಬೇರೆ ರಾಗಗಳು. ಕರ್ನಾಟಕ ಶಾಸ್ತ್ರೀಯಾದ ಹಿಂದೊಳಕ್ಕೆ ಪ್ರತಿರೂಪವಾದ ಹಿಂದುಸ್ಥಾನಿ ರಾಗ ಮಾಕೋಶ್. 

ಹಿಂದೋಳ ರಾಗದ ಪ್ರಸಿದ್ದಿ ಇರುವುದೇ ಮನೋಲ್ಲಾಸಕ್ಕಾಗಿ, ಮಾನಸ್ಸಿಗೆ ಮುದ ನೀಡುವುದಕ್ಕಾಗಿ. ದೊಡ್ಡ ದೊಡ್ಡ ಸಂಗೀತ ಕಚೇರಿಗಳಲ್ಲಿ ಸಾಮಾನ್ಯವಾಗಿ ವಿದ್ವಾಂಸರು ಈ ರಾಗವನ್ನು ಹಾಡುತ್ತಾರೆ. 

ರಚನೆ ಮತ್ತು ಲಕ್ಷಣ:

ಹಿಂದೋಳ "ಸಮ್ಮೀತೀಯ" ರಾಗವಾಗಿದ್ದು ರಿಷಭ ಮತ್ತು ಪಂಚಮಗಳಿರುವುದಿಲ್ಲ. ಇದು ಔಡವ ಔಡವ (ಔಡವ = ೫) ರಾಗವಾಗಿರುತ್ತದೆ. Pentatonic Scale ಭಾರತೀಯ ಸಂಗೀತ ಶಾಸ್ತ್ರವಲ್ಲದೆ, ಚೈನೀಸ್ ಮತ್ತು ಈಸ್ಟ್ ಏಶಿಯನ್ ಸಂಗೀತಗಳಲ್ಲೂ ಇರುವುದರಿಂದ, ನಾವು ಹಿಂದೋಳ ರಾಗದ ನೆರಳನ್ನು ಅಲ್ಲೂ ಕಾಣಬಹುದು. 

ಹಿಂದೋಳ ರಾಗದ ಆರೋಹಣ-ಅವರೋಹಣಗಳು ಈ ಕೆಳಗಂಡಂತಿದೆ: 
ಸ   ಗ2   ಮ1   ದ1    ನೀ2   ಸ 
ಸ   ನೀ2   ದ1   ಮ1   ಗ2    ಸ 
ಸಾಧಾರಣ ಗಾಂಧಾರ, ಶುದ್ಧ ಮಾಧ್ಯಮ, ಶುದ್ಧ ದೈವತ, ಕೈಶಿಕಿ ನಿಷಾದಗಳು ಈ ರಾಗದ ಸ್ವರಗಳು. ಸಂಗೀತ ಲೋಕದಲ್ಲಿ ಹಿಂದೋಳ ರಾಗದ ಉದ್ಭವಕ್ಕೆ ಕಾರಣವಾದ ರಾಗದ ಬಗ್ಗೆ ದ್ವಂದ್ವವಿದೆ. ಕೆಲ ವಿದ್ವಾಂಸರ ಪ್ರಕಾರ ಇದು "ನಟಭೈರವಿ" (೨೦ನೇ ಮೇಳಕರ್ತ) ರಾಗದಿಂದ ಉದ್ಭವವಾಗಿದ್ದರೆ, ಕೆಲವರ ಪ್ರಕಾರ "ಹನುಮತೋಡಿ" (೮ನೇ ಮೇಳಕರ್ತ) ರಾಗದಿಂದ ಉದ್ಭವಿಸಿದೆ ಎನ್ನುತ್ತಾರೆ. ಹಿಂದೋಳ ಈ ಎರಡೂ ರಾಗಗಳಿಂದ ಕೂಡ ಜನಿಸಿರಬಹುದು. ರಿಷಭ ಮತ್ತು ಪಂಚಮ ಬಿಟ್ಟರೆ ಎರಡೂ ರಾಗಗಳನ್ನು ಕಾರಣಿಸಬಹುದು. ಆದ್ದರಿಂದಲೇ ಹಿಂದೋಳ ಮೇಳಕರ್ತ ರಾಗವಲ್ಲ (ಸಪ್ತ ಸ್ವರಗಳನ್ನು ಹೊಂದಿಲ್ಲ). 

 ಪ್ರಸಿದ್ಧ ಸಂಯೋಜನೆಗಳು:
ಸಾಮಜವರ ಗಮನ (ತ್ಯಾಗರಾಜ)
ಮಾಮಾವತು ಶ್ರೀ (ಮೈಸೂರು ವಸುದೇವಾಚಾರ)
ಗೋವರ್ಧನ ಗಿರಿ ಸ್ಮರಾಮಿ (ಮುತ್ತುಸ್ವಾಮಿ ದೀಕ್ಷಿತರ)
ಸಾಮಗಾನ ಲೋಲೆ (ಪಾಪನಾಶಂ ಶಿವನ್)
ನಂಬಿ ಕೆಟ್ಟವರ (ಪಾಪನಾಶಂ ಶಿವನ್)

ಇವಿಷ್ಟೇ ಅಲ್ಲದೆ ಇನ್ನು ಹಲವಾರು ಭಜನೆ, ಕೃತಿ, ಸ್ತೋತ್ರ ಮತ್ತು ಸಿನಿಮಾ ಸಂಗೀತಗಳಲ್ಲಿ "ಹಿಂದೋಳ" ರಾಗವನ್ನು ಬಳಸಿಕೊಳ್ಳಲಾಗಿದೆ. 

"ಹಿಂದೋಳ" ರಾಗದ ಗ್ರಹಭೇದ ಮಾಡಿದಾಗ ೪ ರಾಗಗಳು ಸಿಗುತ್ತವೆ.  ಅವೇ ಮೋಹನ, ಶುದ್ಧ ಸಾವೇರಿ, ಉದಯರವಿ ಚಂದ್ರಿಕಾ (ಶುದ್ಧಧನ್ಯಾಸಿ) ಮತ್ತು ಮಧ್ಯಮಾವತಿ. 

ಕೆಲ ಪ್ರಸಿದ್ದಿ ಪಡೆದ "ಹಿಂದೋಳ" ರಾಗದ ಸಿನಿಮಾ ಹಾಡುಗಳ link ಕೆಳಗಿವೆ:


This Article was published on Timeskannada e-newspaper http://timeskannada.com/?p=4300

Wednesday, October 8, 2014

Wednesday, February 20, 2013

ಕಾಲನ ಕರೆ ಘಂಟೆ - Tornado's

ಪ್ರಪಂಚ ಮುಂದುವರೆದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಹೆಚ್ಚುತ್ತಿವೆ. ವಿಜ್ಞಾನ ಮುಂದುವರೆದಂತೆ ಮಾನವ ಪ್ರಕೃತಿಗೆ ಸವಾಲೊಡ್ಡುವ ಭರಾಟೆಯಲ್ಲಿದ್ದಾನೆ. ಅಂತೆಯೇ ಪ್ರಕೃತಿ ವಿಕೋಪಗಳೇನು ಕಡಿಮೆಯಾಗಿಲ್ಲ. ದಿನ ಕಳೆದಂತೆ 'ಸೃಷ್ಟಿ' ಆಕೆಯಲ್ಲಾಗುತ್ತಿರುವ ಕೃತಕ ಬದಲಾವಣೆಗನುಗುಣವಾಗಿ ಪ್ರತಿಕ್ರಯಿಸುತ್ತಿದ್ದಾಳೆ. ಆ ಪ್ರತಿಕ್ರಿಯಗಳಲ್ಲಿ ಮಾನವ ಕಂಡರಿಯದ ಕೆಲ ವಿಕೋಪಗಳು ನಾವು, ನೀವು ಮರೆಯುವಂತಿಲ್ಲ. ಮರೆತರೂ, ಮನಸ್ಸು ದುಃಖಪಡುವ ಘಟನೆಗಳಲ್ಲಿ ಸುನಾಮಿ, ತೊಹೊಕು ಭೂಕಂಪ, ಟೊರ್ನೊಡೊಗಳು, ಹರ್ರಿಕೇನ್ಗಳು ಹೀಗೇ ಹತ್ತು ಹಲವು. 

 Tornodoಗಳ ಬಗ್ಗೆ ದಿನನಿತ್ಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ. ಹಾಗಾದರೆ ಏನಿದು Tornodo's? ಇವು ಹೇಗೆ ಹುಟ್ಟುತ್ತವೆ?

Tornado

ಟೊರ್ನೊಡೊ ಒಂದು ತಿರುಗುತ್ತಿರುವ, ಗಾಳಿಯಿಂದ ಮೂಡುವ ಆಕೃತಿ. ಇದೊಂದು ಭೂಮಿಯಿಂದ ಆಗಸದಲ್ಲಿರುವ ಕಾರ್ಮೋಡದ ಮಧ್ಯ ರೌದ್ರವಾಗಿ ಸುತ್ತುವ ಗಾಳಿಯ ಆಕೃತಿ. ಇದು ಭೂಮಿಯ ಕಡಿಮೆ ಒತ್ತಡ ಇರುವಂತಹ ಭಾಗಗಳಲ್ಲಿ ಕಾಣಸಿಗುತ್ತವೆ. ಇದನ್ನು twisters ಅಥವಾ cyclones ಎಂದೂ ಕರೆಯುತ್ತಾರೆ. ಟೊರ್ನೊಡೊಗಳು ಹಲವಾರು ಘಾತ್ರ, ಆಕೃತಿಯಲ್ಲಿರುತ್ತವೆ. ಸಾಮಾನ್ಯವಾಗಿ ಇವು ಬೃಹದಾಕಾರದ ನಳಿಕೆಯ ಆಕೃತಿಯಲ್ಲಿರುತ್ತವೆ. ಇವುಗಳ ಒಂದು ಅಂತ್ಯ ಭೂಮಿಗೂ ಮತ್ತೊಂದು ಕೊನೆ ಕಾರ್ಮೊಡಗಳಿಗೂ ಅಥವಾ ಕಾರ್ಮೋಡಗಳ ಅಡಿಗೂ ಹೊಂದಿಕೊಂಡಿರುತ್ತವೆ. ಸಾಮಾನ್ಯವಾಗಿ ಟೊರ್ನೊಡೊಗಳ ಗಾಳಿಯ ವೇಗ ಘಂಟೆಗೆ ೧೧೦ ಮೈಲಿಗಿಂತ ಕಡಿಮೆ ಇರುತ್ತದೆ. ಸುಮಾರು ೨೫೦ ಅಡಿಯಷ್ಟು ಎತ್ತರವಿರುವ ಟೊರ್ನೊಡೊಗಳು ಕೊನೆಗೊಳ್ಳುವ ಮುನ್ನ ಕೆಲವಾರು ಮೈಲಿಗಳಷ್ಟು ಅಗಲವಿರುತ್ತವೆ. ಅತೀ ಭಯಾನಕ ಟೊರ್ನೊಡೊಗಳು ಸುಮಾರು ಘಂಟೆಗೆ ೩೦೦ ಮೈಲಿಗಳಷ್ಟು ಚಲಿಸುತ್ತವೆ ಮತ್ತು ಎರಡಕ್ಕಿಂತ ಹೆಚ್ಚು ಮೈಲಿ ಅಗಲವಿರುತ್ತವೆ. 

ಸಾಮಾನ್ಯವಾಗಿ ನಾವು ಟೊರ್ನೊಡೊಗಳನ್ನು Antartica ಮತ್ತು North Americaಗಳಲ್ಲಿ ಹೆಚ್ಚಾಗಿ ಕಾಣಬಹುದು. ಪ್ರತಿ ವರ್ಷ ಅತೀ ಹೆಚ್ಚು ಟೊರ್ನೊಡೊಗಳು ಅಮೇರಿಕಾದ "Tornado Alley"ಯಲ್ಲಿ ಕಾಣುತ್ತೇವೆ. ಅಪರೂಪಕ್ಕೊಮ್ಮೆ South ಅಮೇರಿಕಾ, South  Africa, Australia, New Zealand ಮತ್ತು ಏಷ್ಯಾದ ದಕ್ಷಿಣ, ಮಧ್ಯ ಹಾಗು ಪೂರ್ವ ಭಾಗಗಳಲ್ಲಿ ಕಾಣಬಹುದು. ಟೊರ್ನೊಡೊಗಳನ್ನು ಅವು ಮೂಡುವ ಮುನ್ನವೇ "Pulse-Doppler radar "ನ ಸಹಾಯದೊಂದಿಗೆ ಕಂಡುಹಿಡಿಯಬಹುದು. ಟೊರ್ನೊಡೊಗಳನ್ನು ಅಳೆಯಲು ಕೆಲವೊಂದು ಮಾಪನಗಳನ್ನು ಉಪಯೋಗಿಸುತ್ತಾರೆ. ಅವೆಂದರೆ "Fuji scale"(F0 to F5) ಅಥವಾ "Enhanced Fuji  Scale"(EF0 to EF5), "TORRO Scale" (T0 to T11).

Tornado Alley
ಭಯಾನಕ ಟೊರ್ನೊಡೊಗಳು ಹಲವಾರು ಸಾವಿನ ಮನೆ ಸೃಷ್ಟಿಸಿವೆ. ಹಲವಾರು ಕುಟುಂಬಗಳನ್ನು ದುಃಖದ ಮಡುವಿನಲ್ಲಿ ತೇಲಿಬಿಟ್ಟಿವೆ. ನೂರಾರು ಹೃದಯ ವಿದ್ರಾವಕ ದೃಶ್ಯಗಳನ್ನು ಸೃಷ್ಟಿಸಿ ಹೋಗಿವೆ. ಅದಕ್ಕೆ ಉದಾಹರಣೆ ೨೦೧೧ರ ಅಮೇರಿಕಾದ Missouri ರಾಜ್ಯದ "Joplin" ಮತ್ತು ೨೦೧೩ರ ಅಮೇರಿಕಾದ Oklahama ರಾಜ್ಯದ "Oklahama City". ಟೊರ್ನೊಡೊಗಳಿಂದ ಕುಟುಂಬ ಕಳೆದುಕೊಂಡವರು ಮತ್ತೆ ತಮ್ಮವರನ್ನು ಭೇಟಿಯಂತಾಗುವಂತಾಗಲಿ.

This Article was published in Timeskannada http://timeskannada.com/?p=2576