ನಮ್ಮಲ್ಲಿ ಅನೇಕರಿಗೆ "ಮುತ್ತುಗ" ಅಥವಾ "ಮತ್ತುಗ" ಹೆಸರೇ ಹೊಸದು. ಮಲೆನಾಡಿನವರಿಗೆ ಇದರ ಕಲ್ಪನೆ ಸ್ವಲ್ಪ ಬರಬಹುದು. ಆದರೆ ಮುತ್ತುಗದ ಹೂ ಭಾರತದ ಎಲ್ಲ ದಿಕ್ಕುಗಳಲ್ಲೂ ಕಾಣಲ್ಪಡುತ್ತದೆ. ಬೆಂಗಳೂರಿನಲ್ಲೂ ಹಲವಾರು ಕಡೆ ಮುತ್ತುಗದ ಹೂ ಕಾಣಸಿಗಬಹುದು. ಹಾಗಾದರೆ "ಮುತ್ತುಗ"ದ ಹೂ ಹೇಗಿರಬಹುದು?
ಮುತ್ತುಗ ಉಷ್ಣವಲಯ ಮತ್ತು ಉಪೋಷ್ಣವಲಯಗಳಲ್ಲಿ ಕಾಣ ಸಿಗುವಂತಹ ಹೂ. ಸಾಮಾನ್ಯವಾಗಿ ಇದು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಇಂಡೋನೇಷ್ಯಾ ಮತ್ತು ಆಫ್ರಿಕಾದ ಕೆಲ ದೇಶಗಳಲ್ಲಿ ಕಂಡು ಬರುತ್ತದೆ. ಕೇಸರಿ ಬಣ್ಣದ ಈ ಚೆಲುವೆಗೆ ಕಾಡಿನ ಬೆಂಕಿ ಮತ್ತು ಬಾಸ್ಟರ್ಡ್ ಟೀಕ್ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷನಲ್ಲಿ "Parrot Tree" ಎಂದು ಕರೆಲ್ಪಡುವ ಮುತ್ತುಗದ ಮರಕ್ಕೆ ಸಸ್ಯಶಾಸ್ತ್ರೀಯ ಕುಟುಂಬ ಹಾಗೂ ವಿಂಗಡನೆ ಈ ಕೆಳಗಂಡಂತಿದೆ:
ವೈಜ್ಞಾನಿಕ ವಿಂಗಡನೆ(Scientific classification)
Kingdom: Plantae
Order: Fabales
Family: Fabaceae
Genus: Butea
Species: B. monosperma
Binomial name
Butea monosperma
ಭಾರತಕ್ಕೂ- ಮತ್ತುಗಕ್ಕೂ ಅವಿನಾಭಾವ ಸಂಬಂಧ:
ಹಿಂದೂ ಪುರಾಣದ ಪ್ರಕಾರ ಮತ್ತುಗದ ಮರವು ಅಗ್ನಿ ದೇವನ ರೂಪ. ಪಾರ್ವತಿ ಮತ್ತು ಪರಶಿವನ ಏಕಾಂತಕ್ಕೆ ಭಂಗಪಡಿಸದ್ದಕ್ಕೆ ಅಗ್ನಿ ದೇವನಿಗೆ ಪಾರ್ವತಿ ಕೊಟ್ಟ ಶಾಪವಿದು ಎಂಬ ನಂಬಿಕೆಯಿದೆ.
ಮುತ್ತುಗದ ಹೂವಿಗೂ ವಸಂತಕ್ಕೂ ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಜನವರಿ ಅಂತ್ಯ - ಫೆಬ್ರುವರಿ ಸಮಯದಲ್ಲಿ ಹೂ ಬಿಡುವ ಕಾಲ. ಪಶ್ಚಿಮ ಬಂಗಾಳದಲ್ಲಿ ಇದನ್ನು ಪಲಶಿ ಎಂದು ಕರೆಯುತ್ತಾರೆ. ರಾಬಿನ್ದ್ರನಾಥ್ ಠಾಗೋರ್ರವರು, ಅವರ ಹಲವಾರು ಪದ್ಯಗಳಲ್ಲಿ ಮತ್ತುಗದ ಹೂವಿನ ಉಲ್ಲೇಖ ಕೊಟ್ಟಿದ್ದಾರೆ. ಜಾರಖಾಂಡ್ ರಾಜ್ಯದಲ್ಲಿ ಮತ್ತುಗಕ್ಕೂ-ಜನಪದಕ್ಕೂ ಹತ್ತಿರದ ಸಂಬಂಧ. ಈ ರಾಜ್ಯದ ಹಲವಾರು ಜಾನಪದ ಕಥೆಗಳಲ್ಲಿ ಕಾಡಿನ ಬೆಂಕಿ ಎಂದು ಮುತ್ತುಗದ ಉಲ್ಲೇಖವಿದೆ. ಇಲ್ಲಿನ ಕಾಡುಗಳು ಸೌಂದರ್ಯಯುತವಾಗಿ ಕಾಣಿಸುವುದೇ ಬೇರೆಲ್ಲ ಮರಗಳು ಬರಿದಾದಾಗ, ಮುತ್ತುಗ ಮೈ ತುಂಬಿದಾಗ. ಮುತ್ತುಗ ಜಾರಖಾಂಡ್ ರಾಜ್ಯ ಹೂ ಆಗಿದೆ. ತೆಲಂಗಾಣ ರಾಜ್ಯದಲ್ಲಿ ಇದು ಶಿವರಾತ್ರಿ ಪೂಜೆಯಲ್ಲಿ ಉಪಯೋಗಿಸಲ್ಪಡುವ ವಿಶೇಷ ಹೂ. ಕರ್ನಾಟಕದಲ್ಲಿ ಇದನ್ನು ರಥಸಪ್ತಮಿಯ ಪೂಜೆಗಳಲ್ಲಿ ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಕೇರಳದಲ್ಲಿ ಪಲಸು ಎಂದು ಕರೆಯಲ್ಪಡುವ ಈ ಹೂವು ಅಗ್ನಿ ಪೂಜೆಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ.
ಮತ್ತುಗದ ಉಪಯೋಗಗಳು:
ಮತ್ತುಗ ಹಲವಾರು ವಿಧಗಳಲ್ಲಿ ಉಪಯೋಗಿಸಬಹುದು. ಮರದ ರೂಪದಲ್ಲಿ, ಅಂಟಿನ ರೂಪದಲ್ಲಿ, ಬಣ್ಣದ ರೂಪದಲ್ಲಿ, ಮೇವಿನ ರೂಪದಲ್ಲಿ ಹೀಗೆ ಹತ್ತು ಹಲವಾರು ವಿಧಗಳಲ್ಲಿ.
ಆಯುರ್ವೇದದಲ್ಲಿ ಮತ್ತುಗ:
ಆಯುರ್ವೇದದಲ್ಲಿ ಮತ್ತುಗದ ಹೂವು, ಬೀಜ, ಅಂಟು ಮತ್ತು ಎಲೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಾಲಾಗುತ್ತದೆ. ಹೂವುಗಳಲ್ಲಿ glucosides, butin, neteroside ಮತ್ತು butrin ಅಂಶ ಜಾಸ್ತಿ ಇದ್ದರೆ, ಬೀಜಗಳಲ್ಲಿ moodooga oil ಅಥವಾ kino-tree oil ಅಂಶ ಜಾಸ್ತಿ ಇದ್ದು, ಹಳದಿ ಬಣ್ಣದ ಎಣ್ಣೆ ಇದಾಗಿರುತ್ತದೆ. ಈ ಎಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಮರದಿಂದ ಬರುವ ಅಂಟಿನಲ್ಲಿ gallic acid ಮತ್ತು tannic acid ಜಾಸ್ತಿ ಇದ್ದಿರುತ್ತದೆ. ಇದರ ಎಲೆಗಳನ್ನು ಟಾನಿಕ್ ಮತ್ತು ಕಾಮೋತ್ತೇಜಕಗಳ ಉತ್ಪಾದನೆಗೆ ಬಳಸುತ್ತಾರೆ. ಇದಲ್ಲದೆ ರಕ್ತ ಹೆಪ್ಪುಗಟ್ಟುವಿಕೆಗೆ ಮತ್ತುಗದ ಎಲೆಗಳು ಉಪಯೋಗಿಸಲ್ಪಡುತ್ತವೆ.
ಮತ್ತುಗ ಮರದ ಉಪಯೋಗಗಳು ಮೇಲಿನಂತಾದರೆ, ಮಾನವ ಶರೀರದ ಸಮಸ್ಯೆಗಳಿಗನುಗುಣವಾಗಿ ಯಾವ ಉಪಯೋಗ ಎಂಬುದು ಕೆಳಗಿನಂತಿದೆ:
೧. ಅತಿಸಾರ ಮತ್ತು ಬೇದಿ
೨. ಹೊಟ್ಟೆಹುಳು
೩. ಸಕ್ಕರೆ ಕಾಯಿಲೆ
೪. ಗಂಟಲು ನೋವು
೫. ಚರ್ಮ ರೋಗ
೬. ಬಿಳಿಸೆರಗು
೭. ಜಲಸಂಚಯನ
ಆಯುರ್ವೇದೀಯವಾಗಿ ಮತ್ತುಗ ಎಷ್ಟೇ ಸಹಾಯಕವಾದ ಔಷದಿಯಾದರೂ ಕೂಡ, ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳುವಂತಿಲ್ಲ. ಸೂಕ್ತ ಮಾಹಿತಿ ಮತ್ತು ಪ್ರಮಾಣಕ್ಕಾಗಿ ಆಯುರ್ವೇದೀಯ ವೈದ್ಯರ ಸಲಹೆ ಅತ್ಯಗತ್ಯ.
ಮತ್ತುಗ ಮೈ ತುಂಬಿದರೆ ಎಲ್ಲೆಲ್ಲೂ ರಕ್ತ ವರ್ಣ. ಸೃಷ್ಟಿ ದೇವೆತೆಗೆ ಸಿರಿಯುಡಿಸಿದ ಭಾವ. "ಕೆಂಪಾದವೋ ಎಲ್ಲ ಕೆಂಪಾದವೋ ... " ಎಂಬ ಕವಿ ವಾಣಿ ಮನ ತುಂಬುತ್ತದೆ. ಎಷ್ಟೇ ಸೌಂದರ್ಯವಿರಲಿ, ಔಷದೀಯ ಗುಣಗಳಿರುವ ಮರಗಳಿರಲಿ, ಭಾರತದಲ್ಲಿ ಮತ್ತು ಭಾರತೀಯ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಮಟ್ಟುಗದಂತಹ ನೂರಾರು ಗಿಡ ಮರಗಳು ವಿನಾಶದಂಚಿನಲ್ಲಿವೆ. ಪರಿಸರ ಪ್ರೀತಿ ಮತ್ತು ಪರಿಸರ ಬೆಳೆಸುವ ಅರಿವು-ಉದ್ದೇಶ ನಮ್ಮ ಸಾಮಾನ್ಯ ಜನರಲ್ಲಿ ಮೂಡಬೇಕಿದೆ. ಇದರಿಂದಾಗಿ ಮತ್ತುಗದಂತಹ ಹಲವಾರು ವಿನಾಶದಂಚಿನ ಸಸ್ಯ ಸಂಕುಲವನ್ನು ಉಳಿಸಿಕೊಳ್ಳಬಹುದು.
This article was published in TimesKannada news paper
This article was published in TimesKannada news paper
No comments:
Post a Comment