ಪ್ರತಿಯೊಬ್ಬ ಮನುಷ್ಯನಿಗೂ ಅತೀ ಮಧುರ ನೆನಪುಗಳೆಂದರೆ ಬಾಲ್ಯದ ದಿನಗಳು. ಎಲ್ಲರ ಬಾಲ್ಯವೂ ಮರೆಯಲಾಗದ ಜೀವನದ ಅಂಗ. ಬಾಲ್ಯವೆಂದರೆ ವರ್ಣರಂಜಿತ. ಹೀಗೆ ಬಾಲ್ಯದಲ್ಲಿ ಕಿವಿ ತುಂಬಿದ ಹಾಡುಗಳಲ್ಲಿ "ಕಾಮನ ಬಿಲ್ಲಿನ ಮೇಲೆ ಓಡುತ ಸಾಗುವ ರೈಲಿದೆ.. ಜಿಗಿ ಜಿಗಿ ಜಿಗಿ ಜೂ ... ಕುಕ್ಕೂ.. " ಕೂಡ ಒಂದು. ಬಾಲ್ಯಕ್ಕೂ- ಕಾಮನಬಿಲ್ಲಿಗೂ ಅವಿನಾಭಾವ ಸಂಬಂಧ. ಅದೆಷ್ಟೋ ದಿನಗಳು ಕಾಮನಬಿಲ್ಲು ಕಟ್ಟಲು ಕಾದಿದ್ದಿದೆ. ಕಾಮನಬಿಲ್ಲು ಕಟ್ಟಿದಾಗ ಕುಣಿದು ಕುಪ್ಪಳಿಸಿ ಪ್ರಪಂಚದ ಅದ್ಭುತಗಳನ್ನು ಕಂಡಷ್ಟು ಖುಷಿಪಟ್ಟಿದ್ದಿದೆ. ಬೆಳೆಯುವಾಗ ಅನೇಕ ಭಾರಿ ಈ ಪ್ರಕೃತಿ ವಿಸ್ಮಯದ ಹಿಂದೆ ಏನಿದೆ ಎಂದು ಮನಸಿನಲ್ಲಿ ನೂರೆಂಟು ಪ್ರಶ್ನೆಗಳು ಮೂಡಿದ್ದಿದೆ. ಏನಿರಬಹುದು ಈ ಕಾಮನ ಬಿಲ್ಲಿನ ರಹಸ್ಯ ?
ಬೆಳಕು (ಬಿಳಿ) ಹಲವಾರು ಬಣ್ಣಗಳ (ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ವಜ್ರ ನೀಲಿ ಮತ್ತು ನೇರಳೆ) ಮಿಶ್ರಣ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದಲೇ ಪ್ರಿಸಂನಲ್ಲಿ ನಾವು ಬಿಳಿ ಬೆಳಕನ್ನು ಹರಿ ಬಿಟ್ಟಾಗ, ಏಳು ಬಣ್ಣಗಳಾಗಿ ಹೊರ ಹೊಮ್ಮುತ್ತದೆ. ಹಾಗಾದರೆ ಬಿಳಿ ಬಣ್ಣದ ಬಗ್ಗೆ ತಿಳಿಯುವ ಮುನ್ನ "ಪ್ರಿಸಂ"ನಲ್ಲಿ ಬಣ್ಣಗಳು ಬೇರೆ ಬೇರೆಯಾಗಿ ಹೊರ ಹೊಮ್ಮಲು ಏನು ಕಾರಣ?
"ಪ್ರಿಸಂ" ಒಂದು ತ್ರಿಭುಜಾಕೃತಿಯ ಗಾಜು ಅಥವಾ ಪ್ಲಾಸ್ಟಿಕ್ ತುಂಡು. ಬಣ್ಣಗಳು ಬೇರೆ ಬೇರೆಯಾಗಲು ಗಾಜಿನ ವಕ್ರೀಕರಣ ಸೂಚಿ (Refractive Index ಅಥವಾ RI ) ಕಾರಣ. ಪ್ರತಿಯೊಂದು ವಸ್ತುವಿಗೂ ಬೇರೆ ಬೇರೆ RI ಗಳಿರುತ್ತವೆ. ಗಾಳಿ ಮತ್ತು ಗಾಜಿನ RI ಗಳು ಬೇರೆ ಬೇರೆ ಯಾಗಿರುವದರಿಂದ ಬೆಳಕು ಬಾಗಲು (bend) ಕಾರಣವಾಗುತ್ತವೆ. ಈ ಬಾಗುವ ಕೋನವು (Refraction Angle) ಬೇರೆ ಬೇರೆ ತರಂಗಗಳ ಬೆಳಕಿನ ಕಿರಣಗಳಿಗೆ ಬೇರೆ ಬೇರೆಯದ್ದಾಗಿರುತ್ತದೆ. ಬೆಳಕು ಪ್ರಿಸಂನ ಎರಡು ಮುಖಗಳ ಮೂಲಕ ಹರಿದಾಗ ಬೇರೆ ಬೇರೆ ಬಣ್ಣಗಳು ಬೇರೆ ಬೇರೆ ಪ್ರಮಾಣದಲ್ಲಿ ಬಾಗಲ್ಪಡುತ್ತವೆ. ಆದುದರಿಂದಲೇ ಪ್ರಿಸಂನಿಂದ ಸಣ್ಣದೊಂದು ಕಾಮನಬಿಲ್ಲು ಹೊರಹೊಮ್ಮುತ್ತದೆ.
ಕಾಮನಬಿಲ್ಲಿನ ರಹಸ್ಯ - ಕಾಮನಬಿಲ್ಲಿನ ಸೃಷ್ಟಿಯಲ್ಲಿ ಗಾಳಿಯಲ್ಲಿರುವ ಮಳೆ ಹನಿಗಳು ಚಿಕ್ಕ ಚಿಕ್ಕ ಪ್ರಿಸಂಗಳಾಗಿ ವರ್ತಿಸುತ್ತವೆ. ಮಳೆ ಹನಿಗಳ ಗಾತ್ರ ಬೇರೆಯದ್ದಾದರೂ, ನಿರ್ವಹಿಸುವ ಕೆಲಸ ಮಾತ್ರ ಪ್ರಿಸಂನದ್ದಾಗಿರುತ್ತದೆ. ಬಿಳಿ ಬೆಳಕು ನೀರಿನ ಹನಿಯೊಳಗೆ ಹರಿದು ಏಳು ಬಣ್ಣಗಳಾಗಿ ಹೊರ ಹೊಮ್ಮುತ್ತದೆ. ಕಾಮನಬಿಲ್ಲು ಮೂಡುವ ಕಾರ್ಯದಲ್ಲಿ ಪ್ರತಿಯೊಂದು ಮಳೆ ಹನಿಯೂ ಕೂಡ ಪ್ರಿಸಂನ ಕೆಲಸ ನಿರ್ವಹಿಸುತ್ತದೆ. ಮಳೆ ಹನಿಯೊಳಗೆ ಬರುವ ಮತ್ತು ಹೊರಹೊಮ್ಮುವ ಕೋನವು ಕೆಂಪುಬಣ್ಣಕ್ಕೆ ೪೨ ಡಿಗ್ರಿಯಿದ್ದರೆ, ನೇರಳೆ ಬಣ್ಣಕ್ಕೆ ೪೦ ಡಿಗ್ರಿಯಾಗಿರುತ್ತದೆ. ಇನ್ನುಳಿದ ಬಣ್ಣಗಳ ಕೋನಗಳು ಇವೆರಡರ ನಡುವಿನಲ್ಲಿರುತ್ತವೆ.
ಹಲವಾರು ಬಾರಿ ನಾವು ಎರಡೆರಡು ಕಾಮನಬಿಲ್ಲನ್ನು ನೋಡಿದ್ದಿದೆ. ಮಳೆ ಹನಿಗಳ ಒಳಗೆ ಎರಡು ಪ್ರತಿಬಿಂಬಗಳುಂಟಾದಾಗ ಇವು ಹುಟ್ಟುತ್ತದೆ. ಮಳೆ ಹನಿಗಳ ಗಾತ್ರ ಸರಿಯಾಗಿರಬೇಕಷ್ಟೆ.
ವೈಜ್ಞಾನಿಕವಾಗಿ ಏನೇ ಕಾರಣಗಳಿದ್ದರೂ, ಕಾಮನಬಿಲ್ಲು ಬಣ್ಣಗಳ ಲೋಕವನ್ನೇ ಸೃಷ್ಟಿ ಮಾಡುವದಂತೂ ನಿಜ. ಭೂಮಿಯಿಂದ ಬಾನಿಗೆ ಏಣಿ ಹಾಕಿದ ಭಾವನೆ.
This article was published in TimesKannada news paper http://timeskannada.com/?p=9321