Wednesday, February 28, 2018

....ಮಲೆನಾಡಿನ ಮಳೆ....


ಬಹುಷಃ ಪ್ರತಿಯಾಬ್ಬರಿಗೂ "ಮಲೆನಾಡು" ಎಂದರೆ ಮಳೆಯನ್ನು ಹೊರತು ಬೇರಾವ ನೆನಪು ಬರಲು ಸಾದ್ಯವಿಲ್ಲ. ಹೆಸರೇ ಹೇಳುವಂತೆ ಇದು ಮಳೆಯ ನಾಡು - ಮಲೆನಾಡು. ಮಲೆನಾಡ ಮಡಿಲಲ್ಲಿ ಬೆಳೆದ ನನಗೆ ಮತ್ತು ಮಳೆಗೆ ಅವಿನಾಭಾವ ಸಂಭಂದ. ನನ್ನ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕಿದಾಗ ಮಳೆಯದ್ದೇ ಮುಖ್ಯ ಪಾತ್ರ.



ಅದೆಷ್ಟೋ ದಿನ ಮಳೆಯಲ್ಲಿ ಆಡಿ ಕುಣಿದಿದ್ದಿದೆ, ಅದೆಷ್ಟೋ ಭಾರಿ ಮಲೆನಾಡ ಇಳಿ ಜಾರಿನ ಪ್ರದೇಶಗಳಲ್ಲಿ ಜಾರಿ ಬಿದ್ದಿದ್ದಿದೆ, ಮಳೆಯಲ್ಲಿ ಆಡಿದ ನೀರಾಟ ಮರೆಯಲಸಾಧ್ಯ. ಸಾಮಾನ್ಯವಾಗಿ ಎಲ್ಲ ಮಕ್ಕಳಿಗೆ ದಸರಾ ಮತ್ತು ಬೇಸಿಗೆ ರಜಾದಿನಗಳ ಅನುಭವವಾಗುತ್ತಿದ್ದರೆ, ಮಲೆನಾಡಿನವರಾದ ನಮಗೆ ಮಳೆಗಾಲದ ರಜೆ ಸಿಗುತ್ತಿತ್ತು.  ಇನ್ನು ಮೇ ತಿಂಗಳು ಬಂತೆಂದರೆ ಹಿಂಗಾರಿನ ಆರ್ಭಟ ಭಯ ತರಿಸುತ್ತಿತ್ತು. ಅದೊಂಥರಾ ಅಮೆರಿಕಾದ ದಕ್ಷಿಣ ಭಾಗದ  Tornodo ಅನುಭವ - ಕಾರ್ಮೋಡದ ನಡುವಿನ ಜೀವನ. ಇನ್ನು ಜೂನ್ ಬಂತೆಂದರೆ ನಮ್ಮ ಮುಂದಿನ ಮೂರೂ ತಿಂಗಳು ಹನಿಗಳೊಂದಿಗಿನ ಚೆಲ್ಲಾಟ. ಹಚ್ಚ ಹಸಿರುಟ್ಟ ಪ್ರಕೃತಿಯನ್ನು ನೋಡುವುದೇ ಕಣ್ಣಿಗೆ ಹಬ್ಬ, ಅದರಲ್ಲೂ ಅದರೊಂದಿಗಿನ ಜೀವನ ಮರೆಯಲಾಗದ ಅನುಭವ.


ಚಿಟ-ಪಟ ಸದ್ದಿನಿಂದ ಆರಂಭವಾಗಿ ಧೋ ಎಂಬ ತಾರಕಕ್ಕೇರಿ ಮತ್ತೆ ಚಿಟ-ಪಟದೊಂದಿಗೆ ಮುಕ್ತಾಯ. ಅದೊಂದು ಹೇಳಲಾರದ, ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಸುಂದರ ಪ್ರತಿಕ್ರಿಯೆ. ಮಳೆಯೇ ಹಾಗೆ ಎಂಥಹ ಕಲ್ಲು ಮನಸ್ಸಿನವರನ್ನು ಮೃದುವಾಗಿಸಿ ಬಿಡುತ್ತದೆ, ತನ್ನೊಳಗೆ ಅವರೂ ಹರ್ಷ ಪಡುವಂತೆ ಮಾಡುತ್ತದೆ. ಮನಸ್ಸು ಸೃಷ್ಟಿಯೋಡಲಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಮೊದ-ಮೊದಲ ತುಂತುರು ಮಳೆಯೊಂದಿಗೆ ಬರುವ ಆ ಮಣ್ಣಿನ ಪರಿಮಳಕ್ಕೆ ಆಧುನಿಕ ಜಗತ್ತಿನ ಯಾವೊಂದು ಪರಿಮಳ ದ್ರವ್ಯವು ಪೈಪೋಟಿ ನೀಡಲಾಗದು.


ಮಳೆ ಸುಂದರ ಪ್ರಕೃತಿಯ ವಿಶೇಷ ಪ್ರತಿಕ್ರಿಯೆಯಾದರೆ, ಮಳೆಗೆ ಮಲೆನಾಡಿನ ಜನರ ಪ್ರತಿಕ್ರಿಯೆಯೇ ಬೇರೆ. ಮಳೆಯಲ್ಲಿ ನೆನೆದು ಬಂದು ನಂತರ ಹಂಡೆಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವುದು. ಅದಾದ ಮೇಲೆ ಬೇಯಿಸಿದ ಹಲಸಿನ ಬೀಜ, ಹಲಸಿನ ಹಪ್ಪಳದೊಂದಿಗೆ ಕೈಗೂ ಬಾಯಿಗೂ ಕಚ್ಚಾಟ. ಬಿಸಿ ಬಿಸಿ ಆರೋಗ್ಯಕರ ಕಷಾಯವಂತೂ ಸದಾ ಸಿದ್ದ. ಇನ್ನು ಬಿಸಿ ಮಜ್ಜಿಗೆ ಹುಳಿ, ಪತ್ರೊಡೆ, ಹಲಸಿನ ಚಿಪ್ಸ್ ಇವೆಲ್ಲದರ ಮಳೆಗಾಲದ ಗೆಳೆತನ ಅವಿನಾಭಾವ. ಇದೆಲ್ಲದರೊಂದಿಗೆ, ಹೊತ್ತಿಲ್ಲದ ಹೊತ್ತಿನಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗುವುದು - ಪ್ರಪಂಚದಲ್ಲಿ ಇದರಷ್ಟು ಸುಖ ಇನ್ನೊಂದಿಲ್ಲ.



ಇನ್ನು, ಮಳೆನಿಂತ ಮೇಲೆ ಹೇಳುವುದೇ ಬೇಡ, ಅದೊಂದು ವಿಭಿನ್ನ ಅನುಭವ. ಸುಂದರ ಹಸಿರು ಸೀರೆಯುಟ್ಟ ಯುವತಿಯಾಗಿರುತ್ತಾಳೆ "ನಿಸರ್ಗೆ". ಪ್ರತಿಯೊಂದು ಎಲೆಯ ಮೇಲೂ ಹನಿ ಹನಿಯಾಗಿ ಗುರುತು ಮೂಡಿಸಿಟ್ಟಿರುತ್ತಾಳೆ "ವರ್ಷಧಾರೆ". ಜೇಡನ ಬಲೆಯಲ್ಲಿ ಸಿಕ್ಕಿಕೊಂಡಿರುವ ಹನಿಗಳು ಪೋಣಿಸಿದ ಮುತ್ತಿನ ಮಣಿಗಳಂತೆ ಕಂಗೊಳಿಸುತ್ತವೆ. ಅದೆಷ್ಟೋ ಜಾತಿಯ ವಿಧ ವಿಧದ ಪುಷ್ಪ ರಾಶಿ ಜೀವ ಕಂಡುಕೊಳ್ಳುತ್ತದೆ. ಅಣಬೆಗಳಂತೂ ಬೇರೆಯ ಪ್ರಪಂಚವನ್ನೇ ಸೃಷ್ಟಿಸಿರುತ್ತವೆ.



ಆಧುನಿಕತೆ ಬೆಳೆದಂತೆ ಮನುಷ್ಯ ಮುಗ್ಧ ಪ್ರಪಂಚದಿಂದ ಪಟ್ಟಣದೆಡೆಗೆ ತನ್ನ ವಾಸ್ತವ್ಯ ಬದಲಿಸುತ್ತಿದ್ದಾನೆ. ದುರಾದೃಷ್ಟವಷತ್, ನಾವು-ನೀವು ಪ್ರತಿಯಾಬ್ಬರೂ ಆ ಮಲೆನಾಡ ವರ್ಷಧಾರೆಯ ಹರ್ಶೋದ್ಗಾರವನ್ನು ಕೇವಲ ದೂರದರ್ಶನದಲ್ಲಿ ವೀಕ್ಷಿಸುವಂತಾಗಿದೆ. ಐದು ನಿಮಿಷ ಸುರಿವ ತುಂತುರು ಮಳೆಯೊಂದಿಗೆ ನಮ್ಮ ಮನಸ್ಸು ರಾಜಿಯಾಗುವಂತಾಗಿದೆ. ಆದರೂ ಮಳೆ ಬರುವಾಗ ಮನಸ್ಸು ಮಲೆನಾಡ ಮಳೆಯನ್ನೇ ಯೋಚಿಸುತ್ತಿರುತ್ತದೆ,
"ಗಗನದಲಿ ಮಳೆಯದಿನ
ಗುಡುಗಿನ ತನನ
ಆ ತನನ ದಿನ ಧರಣಿಯಲಿ, ಹಸಿರಿನ ಜನನ...
ಮಲೆನಾಡಿನ ......
ಮಳೆ ಹಾಡಿನ .........
ಪಿಸುಮಾತಿನ..
ಹೊಸತನಾ... .
ಸವಿದೆನಾ ...... " ಎಂಬಂತೆ.

Monday, February 19, 2018

Canvas Painting: Beyond Everything