Monday, November 13, 2017
Sunday, May 28, 2017
Wednesday, March 15, 2017
ಸುಗ್ಗಿ ಸಂಭ್ರಮದ ಸುಂದರ ಹಬ್ಬ - ಸಂಕ್ರಾಂತಿ
ಸಂಕ್ರಾಂತಿ ಅಥವಾ ಸುಗ್ಗಿಯ ಹಬ್ಬ ಭಾರತದ ಬಹು ಭಾಗಗಳಲ್ಲಿ ಆಚರಿಸುವ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲ್ಪಡುವ ಈ ಹಬ್ಬವನ್ನು, ಸಂಕ್ರಾಂತಿ ಎಂದು ಕರ್ನಾಟಕ, ಆಂಧ್ರ, ತೆಲಂಗಾಣ, ಬಿಹಾರ್, ಝಾರ್ಖಂಡ್ ಮುಂತಾದ ಹಲವಾರು ರಾಜ್ಯಗಳಲ್ಲಿ ಕರೆಯುತ್ತಾರೆ. ಸಂಕ್ರಾತಿ ಪದದ ನಿಜವಾದ ಅರ್ಥ "ಚಲನ". ಜೀವವಿರುವ ಪ್ರತಿಯೊಂದು ವಸ್ತುವೂ ಚಲಿಸಲೇಬೇಕು. ನಮ್ಮ ಹಿರಿಯರು ನಮಗಿಂತ ಮೊದಲು ಚಲಿಸಿದರೆ, ನಮಗಿಂತ ಕಿರಿಯರು ನಮ್ಮ ಚಲನಕ್ಕೆ ಕಾಯುತ್ತಾರೆ. ಭೂ ಮಂಡಲ ಚಲಿಸುವಾಗ ಅದಕ್ಕನುಸಾರವಾಗಿ ಜೀವಿಗಳನ್ನು ತರಬೇತಿ ನೀಡುತ್ತದೆ. ಚಲನೆ ಒಂದು ಹಂತದವರೆಗೆ ಸುಖಕರವಾಗಿರುತ್ತದೆ. ನಿಧಾನವಾಗಿ ಋತುಗಳನ್ನು ಬದಲಿಸುತ್ತಾ ಚಲಿಸುವ ಭೂಮಿ, ಒಂದೇ ಭಾರಿಗೆ ರಭಸವಾಗಿ ಚಲಿಸಲಾರಂಭಿಸಿದರೆ ನಮ್ಮ ಗತಿ ದೇವರೇ ಬಲ್ಲ. ಆದ್ದರಿಂದ ಯಾವುದೇ ಚಲನೆಗೆ ಪರಿಮಿತಿಯ ಅವಶ್ಯಕತೆ ತುಂಬಾ ಇದೆ.
ಮಕರ ಸಂಕ್ರಾತಿಯ ವೈಶಿಷ್ಟ್ಯ:
ರಾಶಿಚಕ್ರದ ಮಹತ್ತರ ಬದಲಾವಣೆಯೇ ಮಕರ ಸಂಕ್ರಾಂತಿಯ ಮಹತ್ವ. ಈ ರಾಶಿಚಕ್ರದಲ್ಲಾಗುವ ಮಹತ್ತರ ಬದಲಾವಣೆಯನ್ನು ಭೂ ಮಂಡಲದಲ್ಲಿರುವ ನಾವು ನೀವೆಲ್ಲರೂ ಖಂಡಿತ ಅನುಭವಿಸಿದ್ದೇವೆ. ಇಂತಹ ಹಲವಾರು ಸಂಕ್ರಾಂತಿಗಳು ವರ್ಷವಿಡೀ ಬಂದರೂ, ಮಕರ ಸಂಕ್ರಾಂತಿ ಮತ್ತು ಅದರ ವಿರುದ್ಧ ಏರ್ಪಡುವ ಕರ್ಕ ಸಂಕ್ರಾಂತಿಗಳಲ್ಲಿ ರಾಶಿ ಚಕ್ರದ ಬದಲಾವಣೆಗಳು ಮಹತ್ತರ. ಮಕರ ಸಂಕ್ರಾಂತಿಯಂದು ಸೂರ್ಯ ಭೂಮಿಯ ಉತ್ತರಭಾಗದೆಡೆ ಬರುವುದರಿಂದ ಇದನ್ನು ಉತ್ತರಾಯಣವೆನ್ನುತ್ತಾರೆ (ಉತ್ತರ + ಅಯನ ). ಕರ್ಕ ಸಂಕ್ರಾಂತಿಯ ನಂತರ ಸೂರ್ಯ ಭೂಮಿಯ ದಕ್ಷಿಣದೆಡೆ ಕಂಡು ಬರುವುದರಿಂದ ಇದನ್ನು ದಕ್ಷಿಣಾಯಣವೆಂದೂ ಕರೆಯುತ್ತಾರೆ. ಭಾರತೀಯರಿಗೆ ಮಕರ ಸಂಕ್ರಾಂತಿಯ ನಂತರ ಸೂರ್ಯ ಸನಿಹವಾಗುವುದರಿಂದ ಬೆಳಕಿನ ಪ್ರಭಾವಳಿ ಜಾಸ್ತಿ.
ರವೇಃ ಸಂಕ್ರಮಣಂ ರಾಶೌ ಸಂಕ್ರಾಂತಿರಿತಿ ಕಥ್ಯತೇ।
ಸ್ನಾನದಾನತಪಃಶ್ರಾದ್ಧಹೋಮಾದಿಷು ಮಹಾಫಲಾ।।
ಮೇಷಾದಿಷು ದ್ವಾದಶರಾಶಿಷು ಕ್ರಮೇಣ ಸಂಸಾರತಃ ಸೂರ್ಯಸ್ಯ
ಪೂರ್ವಸ್ಮಾದ್ರಾಶೇಃ ಉತ್ತರರಾಶೌ ಸಂಕ್ರಮಣಂ ಪ್ರವೇಶಃ ಸಂಕ್ರಾಂತಿಃ ।
ಒಂದು ರಾಶಿಯಿಂದ ಮುಂದಿನ ರಾಶಿಗೆ ರವಿಯ ಪ್ರವೇಶವನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಆ ಮುಹೂರ್ತದಲ್ಲಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿ ಆಚರಣೆಗಳನ್ನು ಮಾಡಿದರೆ ಮಹಾಫಲ ಪ್ರಾಪ್ತವಾಗುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಪ್ರವೇಶ ಮಾಡುವುದಲ್ಲದೇ ಗ್ರಹಗಳು, ನಕ್ಷತ್ರ ಮತ್ತು ರಾಶಿಗಳಲ್ಲಿ ಪ್ರವೇಶ ಮಾಡುವುದು ಕೂಡ ಸಂಕ್ರಾಂತಿ ಪುಣ್ಯಕಾಲದಲ್ಲಿಯೇ. ಆದರೂ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದನ್ನೇ ವಿಶೇಷವಾಗಿ ಸಂಕ್ರಾಂತಿಯೆಂದು ಕರೆಯುವುದು ರೂಢಿಯಾಗಿದೆ
ಕಾಲವೊಂದಿತ್ತು ಮಾನವ ಭೂಮಿಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಹಾಗೆ ತಿನ್ನಲಷ್ಟೆ ಕಲಿತಿದ್ದ. ಕಾಲ ಮುಂದುವರಿದಂತೆ ತನ್ನ ಆಹಾರವನ್ನು ತಾನೇ ತಯಾರಿಸಲು ಕಲಿತ. ತಯಾರಿಸುವ ಕಲಿಕಾ ವಿಧಾನದಲ್ಲಿ, ಕೃಷಿ ಮಾಡುವುದನ್ನೂ ಕಲಿತ. ಮಾನವನಿಗೆ ಹುಡುಕಿ ತಿನ್ನುವಾಗ ಇರುವುದಷ್ಟೇ ಉಪಯೋಗಿಸಲು ಗೊತ್ತಿತ್ತು. ಕೃಷಿಯೊಂದಿಗೆ ತನಗೆ ಬೇಕಾದ್ದನ್ನು ತಯಾರಿಸಿಕೊಳ್ಳುವ ವಿಧಾನವನ್ನು ಕಲಿತುಕೊಂಡ. ನಾವು ಮಗುವಾದಾಗ ತಾಯಿ ಕೊಟ್ಟಿದ್ದನ್ನಷ್ಟೇ ತಿನ್ನಲು ಗೊತ್ತಿರುತ್ತದೆ, ಬೆಳೆಯುತ್ತಾ ಹೋದಂತೆ ನಾವು ಸ್ವಾವಲಂಬಿಗಳಾಗುತ್ತೇವೆ - ಇದೊಂದು ಮಾನವ ಕುಲದ ಬದಲಾವಣೆಗೆ ಸಂಕ್ಷಿಪ್ತ ಪರ್ಯಾಯಾವಲೋಕನ. ಸ್ವಾವಲಂಬಿಗಳಾದಂತೆ ಹೇಗೆ ತಾಯಿಯ ಮಡಿಲಿಂದ ದೂರ ಸರಿಯುತ್ತೇವೆಯೋ ಹಾಗೆಯೇ ಆಧುನಿಕತೆ ಬೆಳೆದಂತೆ ಮಾನವ ನಿಸರ್ಗದ ಮಡಿಲಿಂದ ಖಂಡಿತ ದೂರ ಸರಿಯುತ್ತಿದ್ದಾನೆ. "ಸಂಕ್ರಾಂತಿ" ಕೃಷಿ ಅವಲಂಬಿತ ಕುಟುಂಬಗಳಿಗೆ ಭೂಮಿಯನ್ನು ವಂದಿಸುವ ದಿನವಾಗಿ ಉಳಿದಿದೆ.
ಸುಗ್ಗಿ ಹಬ್ಬ "ಸಂಕ್ರಾಂತಿ":
ಸಂಕ್ರಾಂತಿಯನ್ನು ಸುಗ್ಗಿ ಹಬ್ಬವೆಂದು ಕರೆಯಲು ಮುಖ್ಯವಾದ ಕಾರಣ "ಕೊಯ್ಲು ಮುಕ್ತಾಯ". ಆದ್ದರಿಂದ ಇದರ ಸಂಭ್ರಮಾಚರಣೆ ಜೋರಾಗಿರುತ್ತದೆ. ಸಂಕ್ರಾಂತಿ ಕೊಯ್ಲು ಮುಕ್ತ್ಯದೊಂದಿಗೆ ಚಳಿಗಾಲದ ಅಂತ್ಯವನ್ನೂ ಸೂಚಿಸುತ್ತದೆ. ರೈತ ಈ ದಿನ ಎತ್ತು, ದನ, ಬೆಳೆದ ಆಹಾರ ಮತ್ತು ಭೂಮಿಯನ್ನು ದೇವರೆಂದು ಪೂಜಿಸುತ್ತಾನೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಆಚರಿಸುವ ಈ ಹಬ್ಬವನ್ನು ಮೊದಲನೇ ದಿನ ಭೂಮಿಗೆ, ಎರಡನೇ ದಿನ ತಮಗೆ ಮತ್ತು ಮೂರನೇ ದಿನ ಜಾನುವಾರುಗಳಿಗೆ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಪಟ್ಟಣಕ್ಕೆ ವಲಸೆಗೊಂಡ ಮಾನವರೊಂದಿಗೆ ಹೋಲಿಸಿದಲ್ಲಿ ರೈತಾಪಿ ವರ್ಗ ವರ್ಷದ ಒಂದು ದಿನವನ್ನಾದರೂ ಭೂಮಿ ಮತ್ತು ಪಶು ಪಕ್ಷಿಗಳಿಗೆ ಮೀಸಲಿಡು
ಸಂಕ್ರಾಂತಿ ಹಳ್ಳಿಗಳಲ್ಲಿ ಸುಗ್ಗಿಯ ಹಬ್ಬವಾದರೆ, ಪಟ್ಟಣಗಳಲ್ಲಿ ಎಳ್ಳು ಬೀರುವ ಹಬ್ಬವಾಗಿ ಪ್ರಚಲಿತವಾಗಿದೆ. ಎಳ್ಳು ಬೆಲ್ಲವನ್ನು ಹೆಂಗಳೆಯರು ಮನೆ ಮನೆಗೆ ಹೋಗಿ ವಿನಿಮಯಗೊಳಿಸುತ್ತಾರೆ. ಮದುವೆಯಾದ ಹೆಣ್ಣುಮಕ್ಕಳು ಮತ್ತೈದೆಯರಿಗೆ ಬಾಗಿನ ಕೊಟ್ಟು ಹಬ್ಬವನ್ನಾಚರಿಸುತ್ತಾರೆ. ಹುಗ್ಗಿ ಮತ್ತು ವಿಭಿನ್ನ ರಂಗೋಲಿಗಳು ಹಬ್ಬದ ಮತ್ತೊಂದು ವೈಶಿಷ್ಟ್ಯ. ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಪದ್ದತಿಯಿರುವುದರಿಂದ ಮಕ್ಕಳು ಮತ್ತು ದೊಡ್ಡವರಿಗೆ ಇದೊಂದು ಮನೋರಂಜನೆಯ ಹಬ್ಬ ಕೂಡ.
ಹಬ್ಬ ಯಾವುದೇ ಇರಲಿ, ಅದಕ್ಕೊಂದು ವಿಶೇಷವಿದ್ದೇ ಇರುತ್ತದೆ. ಬರಿ ಆಚರಣೆಯೊಂದೇ ಅಲ್ಲದೆ ಅದರ ವಿಶೇಷತೆಯನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ತಿಳಿದುಕೊಂಡ ವಿಷಯದೊಂದಿಗೆ, ನಮ್ಮ ಆಚಾರ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಜವಾಬ್ದಾರಿ. ಸಂಕ್ರಾಂತಿ ಹಬ್ಬದೊಂದಿಗೆ "ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡೋಣ".
This article bagged first place at "MILANA ADULT ESSAY COMPETITION - 2017"
Thursday, February 23, 2017
Wednesday, January 18, 2017
Tuesday, January 3, 2017
Subscribe to:
Posts (Atom)