ಕೆಲವೊಂದು ರಾಗಗಳೇ ಹಾಗೆ. ಒಮ್ಮೆ ಕೇಳಿದರೆ, ಕಿವಿಯೊಳಗೆ ದಿನವೆಲ್ಲ ಗುಯ್ ಗುಡುತ್ತಿರುತ್ತವೆ. ಬೇರೆ ಹಾಡುಗಳನ್ನರಸಿ ಬಾಯಿ ಹೊರಟರೂ, ಮನಸ್ಸು ಅಲ್ಲೇ ಸ್ಥಬ್ಧವಾಗುವಂತೆ ಮಾಡಿರುತ್ತವೆ. ಹೀಗೊಂದು ಹಾಡು ಮೊನ್ನೆ ನನ್ನೊಳಗೆ ಹೊಕ್ಕು ಕಿವಿಯನ್ನು ಕೊರೆಯುತ್ತಿತ್ತು. ಹಾಡು ತಮಿಳು ಭಾಷೆಯದ್ದಾದರೂ ಮನಸಲ್ಲಿ ಬೇರೂರಿದ್ದು ಅದರ ರಾಗ. ಅದೇ.. ರಾಗ "ಹಿಂದೋಳ".
ಹಿಂದೋಳ ಕರ್ನಾಟಕ ಶಾಸ್ತ್ರೀಯ ಪ್ರಕಾರದ ಒಂದು ರಾಗ. ಇದಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನವಿದೆ. ಇದು ಔಡವ ರಾಗ (ಪಂಚಸ್ವರ scale ಅಥವಾ pentatonic scale). ಇದೊಂದು ಜನ್ಯ ರಾಗವೂ ಹೌದು (ಇದರಲ್ಲಿ ಸಪ್ತ ಸ್ವರಗಳಿರುವುದಿಲ್ಲವಾದ್ದರಿಂದ). ಕರ್ನಾಟಕ ಶಾಸ್ತ್ರೀಯ ಪ್ರಕಾರದ "ಹಿಂದೋಳ" ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಪ್ರಕಾರದ "ಹಿಂದೋಳ್" ಬೇರೆ ಬೇರೆ ರಾಗಗಳು. ಕರ್ನಾಟಕ ಶಾಸ್ತ್ರೀಯಾದ ಹಿಂದೊಳಕ್ಕೆ ಪ್ರತಿರೂಪವಾದ ಹಿಂದುಸ್ಥಾನಿ ರಾಗ ಮಾಕೋಶ್.
ಹಿಂದೋಳ ರಾಗದ ಪ್ರಸಿದ್ದಿ ಇರುವುದೇ ಮನೋಲ್ಲಾಸಕ್ಕಾಗಿ, ಮಾನಸ್ಸಿಗೆ ಮುದ ನೀಡುವುದಕ್ಕಾಗಿ. ದೊಡ್ಡ ದೊಡ್ಡ ಸಂಗೀತ ಕಚೇರಿಗಳಲ್ಲಿ ಸಾಮಾನ್ಯವಾಗಿ ವಿದ್ವಾಂಸರು ಈ ರಾಗವನ್ನು ಹಾಡುತ್ತಾರೆ.
ರಚನೆ ಮತ್ತು ಲಕ್ಷಣ:
ಹಿಂದೋಳ "ಸಮ್ಮೀತೀಯ" ರಾಗವಾಗಿದ್ದು ರಿಷಭ ಮತ್ತು ಪಂಚಮಗಳಿರುವುದಿಲ್ಲ. ಇದು ಔಡವ ಔಡವ (ಔಡವ = ೫) ರಾಗವಾಗಿರುತ್ತದೆ. Pentatonic Scale ಭಾರತೀಯ ಸಂಗೀತ ಶಾಸ್ತ್ರವಲ್ಲದೆ, ಚೈನೀಸ್ ಮತ್ತು ಈಸ್ಟ್ ಏಶಿಯನ್ ಸಂಗೀತಗಳಲ್ಲೂ ಇರುವುದರಿಂದ, ನಾವು ಹಿಂದೋಳ ರಾಗದ ನೆರಳನ್ನು ಅಲ್ಲೂ ಕಾಣಬಹುದು.
ಹಿಂದೋಳ ರಾಗದ ಆರೋಹಣ-ಅವರೋಹಣಗಳು ಈ ಕೆಳಗಂಡಂತಿದೆ:
ಸ ಗ2 ಮ1 ದ1 ನೀ2 ಸ
ಸ ನೀ2 ದ1 ಮ1 ಗ2 ಸ
ಸಾಧಾರಣ ಗಾಂಧಾರ, ಶುದ್ಧ ಮಾಧ್ಯಮ, ಶುದ್ಧ ದೈವತ, ಕೈಶಿಕಿ ನಿಷಾದಗಳು ಈ ರಾಗದ ಸ್ವರಗಳು. ಸಂಗೀತ ಲೋಕದಲ್ಲಿ ಹಿಂದೋಳ ರಾಗದ ಉದ್ಭವಕ್ಕೆ ಕಾರಣವಾದ ರಾಗದ ಬಗ್ಗೆ ದ್ವಂದ್ವವಿದೆ. ಕೆಲ ವಿದ್ವಾಂಸರ ಪ್ರಕಾರ ಇದು "ನಟಭೈರವಿ" (೨೦ನೇ ಮೇಳಕರ್ತ) ರಾಗದಿಂದ ಉದ್ಭವವಾಗಿದ್ದರೆ, ಕೆಲವರ ಪ್ರಕಾರ "ಹನುಮತೋಡಿ" (೮ನೇ ಮೇಳಕರ್ತ) ರಾಗದಿಂದ ಉದ್ಭವಿಸಿದೆ ಎನ್ನುತ್ತಾರೆ. ಹಿಂದೋಳ ಈ ಎರಡೂ ರಾಗಗಳಿಂದ ಕೂಡ ಜನಿಸಿರಬಹುದು. ರಿಷಭ ಮತ್ತು ಪಂಚಮ ಬಿಟ್ಟರೆ ಎರಡೂ ರಾಗಗಳನ್ನು ಕಾರಣಿಸಬಹುದು. ಆದ್ದರಿಂದಲೇ ಹಿಂದೋಳ ಮೇಳಕರ್ತ ರಾಗವಲ್ಲ (ಸಪ್ತ ಸ್ವರಗಳನ್ನು ಹೊಂದಿಲ್ಲ).
ಪ್ರಸಿದ್ಧ ಸಂಯೋಜನೆಗಳು:
ಸಾಮಜವರ ಗಮನ (ತ್ಯಾಗರಾಜ)
ಮಾಮಾವತು ಶ್ರೀ (ಮೈಸೂರು ವಸುದೇವಾಚಾರ)
ಗೋವರ್ಧನ ಗಿರಿ ಸ್ಮರಾಮಿ (ಮುತ್ತುಸ್ವಾಮಿ ದೀಕ್ಷಿತರ)
ಸಾಮಗಾನ ಲೋಲೆ (ಪಾಪನಾಶಂ ಶಿವನ್)
ನಂಬಿ ಕೆಟ್ಟವರ (ಪಾಪನಾಶಂ ಶಿವನ್)
ಇವಿಷ್ಟೇ ಅಲ್ಲದೆ ಇನ್ನು ಹಲವಾರು ಭಜನೆ, ಕೃತಿ, ಸ್ತೋತ್ರ ಮತ್ತು ಸಿನಿಮಾ ಸಂಗೀತಗಳಲ್ಲಿ "ಹಿಂದೋಳ" ರಾಗವನ್ನು ಬಳಸಿಕೊಳ್ಳಲಾಗಿದೆ.
"ಹಿಂದೋಳ" ರಾಗದ ಗ್ರಹಭೇದ ಮಾಡಿದಾಗ ೪ ರಾಗಗಳು ಸಿಗುತ್ತವೆ. ಅವೇ ಮೋಹನ, ಶುದ್ಧ ಸಾವೇರಿ, ಉದಯರವಿ ಚಂದ್ರಿಕಾ (ಶುದ್ಧಧನ್ಯಾಸಿ) ಮತ್ತು ಮಧ್ಯಮಾವತಿ.
ಕೆಲ ಪ್ರಸಿದ್ದಿ ಪಡೆದ "ಹಿಂದೋಳ" ರಾಗದ ಸಿನಿಮಾ ಹಾಡುಗಳ link ಕೆಳಗಿವೆ: