ಬಹುಷಃ ಪ್ರತಿಯಾಬ್ಬ ಮನುಷ್ಯನಿಗೂ "ಮಲೆನಾಡು" ಎಂದರೆ ಮಳೆಯನ್ನು ಹೊರತು ಬೇರಾವ ನೆನಪು ಬರಲು ಸಾದ್ಯವಿಲ್ಲ.
ಹೌದು, ನನ್ನ ಇಂದಿನ ವಿಷಯ "ಮಲೆನಾಡ ಮಳೆ".
ಚಿಟ-ಪಟ ಸದ್ದಿನಿಂದ ಆರಂಭವಾಗಿ ಧೋ ಎಂಬ ತಾರಕಕ್ಕೇರಿ ಮತ್ತೆ ಚಿಟ-ಪಟದೊಂದಿಗೆ ಮುಕ್ತಾಯ. ಅದೊಂದು ಹೇಳಲಾರದ, ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಸುಂದರ ಪ್ರತಿಕ್ರಿಯೆ. ಮಳೆಯೇ ಹಾಗೆ ಎಂಥಹ ಕಲ್ಲು ಮನಸ್ಸಿನವರನ್ನು ಮೃದುವಾಗಿಸಿ ಬಿಡುತ್ತದೆ, ತನ್ನೊಳಗೆ ಅವರೂ ಹರ್ಷ ಪಡುವಂತೆ ಮಾಡುತ್ತದೆ. ಮನಸ್ಸು ಸೃಷ್ಟಿಯೋಡಲಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಮೊದ-ಮೊದಲ ತುಂತುರು ಮಳೆಯೊಂದಿಗೆ ಬರುವ ಆ ಮಣ್ಣಿನ ಪರಿಮಳಕ್ಕೆ ಆಧುನಿಕ ಜಗತ್ತಿನ ಯಾವೊಂದು ಪರಿಮಳ ದ್ರವ್ಯವು ಪೈಪೋಟಿ ನೀಡಲಾಗದು.
ಮಳೆ ಸುಂದರ ಪ್ರಕೃತಿಯ ವಿಶೇಷ ಪ್ರತಿಕ್ರಿಯೆಯಾದರೆ, ಮಳೆಗೆ ಮಲೆನಾಡಿನ ಜನರ ಪ್ರತಿಕ್ರಿಯೆಯೇ ಬೇರೆ. ಮಳೆಯಲ್ಲಿ ನೆನೆದು ಬಂದು ನಂತರ ಹಂಡೆಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವುದು. ಅದಾದ ಮೇಲೆ ಬೇಯಿಸಿದ ಹಲಸಿನ ಬೀಜ, ಹಲಸಿನ ಹಪ್ಪಳದೊಂದಿಗೆ ಕೈಗೂ ಬಾಯಿಗೂ ಕಚ್ಚಾಟ. ಹೊತ್ತಿಲ್ಲದ ಹೊತ್ತಿನಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗುವುದು. ಪ್ರಪಂಚದಲ್ಲಿ ಇದರಷ್ಟು ಸುಖ ಇನ್ನೊಂದಿಲ್ಲ.
ಇನ್ನು, ಮಳೆನಿಂತ ಮೇಲೆ ಹೇಳುವುದೇ ಬೇಡ, ಅದೊಂದು ವಿಭಿನ್ನ ಅನುಭವ. ಸುಂದರ ಹಸಿರು ಸೀರೆಯುಟ್ಟ ಯುವತಿಯಾಗಿರುತ್ತಾಳೆ "ನಿಸರ್ಗೆ". ಪ್ರತಿಯೊಂದು ಎಲೆಯ ಮೇಲೂ ಹನಿ ಹನಿಯಾಗಿ ಗುರುತು ಮೂಡಿಸಿಟ್ಟಿರುತ್ತಾಳೆ "ವರ್ಷಧಾರೆ".
ಆಧುನಿಕತೆ ಬೆಳೆದಂತೆ ಮನುಷ್ಯ ಮುಗ್ಧ ಪ್ರಪಂಚದಿಂದ ಪಟ್ಟಣದೆಡೆಗೆ ತನ್ನ ವಾಸ್ತವ್ಯ ಬದಲಿಸುತ್ತಿದ್ದಾನೆ. ದುರಾದೃಷ್ಟವಷತ್, ನಾವು-ನೀವು ಪ್ರತಿಯಾಬ್ಬರೂ ಆ ಮಲೆನಾಡ ವರ್ಷಧಾರೆಯ ಹರ್ಶೋದ್ಗಾರವನ್ನು ಕೇವಲ TVಯಲ್ಲಿ ವೀಕ್ಷಿಸುವಂತಾಗಿದೆ. 5 ನಿಮಿಷ ಸುರಿವ ತುಂತುರು ಮಳೆಯೊಂದಿಗೆ ನಮ್ಮ ಮನಸ್ಸು compromise ಆಗುವಂತಾಗಿದೆ. ಆದರೂ ಮಳೆ ಬರುವಾಗ ಮನಸ್ಸು ಮಲೆನಾಡ ಮಳೆಯನ್ನೇ ಯೋಚಿಸುತ್ತಿರುತ್ತದೆ,
"ಗಗನದಲಿ ಮಳೆಯದಿನ
ಗುಡುಗಿನ ತನನ
ಆ ತನನ ದಿನ ಧರಣಿಯಲಿ, ಹಸಿರಿನ ಜನನ...
ಮಲೆನಾಡಿನ ......
ಮಳೆ ಹಾಡಿನ .........
ಪಿಸುಮಾತಿನ..
ಹೊಸತನಾ... .
ಸವಿದೆನಾ ...... " ಎಂಬಂತೆ.